ಪ್ರಧಾನಿ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಘಟನೆ ಜಾರ್ಖಂಡ್ ನಲ್ಲಿ ಶುಕ್ರವಾರ ಸಂಭವಿಸಿದೆ.
ತಾಂತ್ರಿಕ ದೋಷದಿಂದ ವಿಮಾನ ಮೇಲೇರಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ದೆಹಲಿಗೆ ಮರಳುವುದು ವಿಳಂಬವಾಗಲಿದೆ.
ಬುಡಕಟ್ಟು ಜನಾಂಗದ ಹಿರಿಯ ನಾಯಕ ಬಿರ್ಸಾ ಮುಂಡಾ ಅವರ ವಾರ್ಷಿಕೋತ್ಸವ ಪ್ರಯುಕ್ತ ಡಿಯೊಗರ್ ನಗರದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರಧಾನಿ ಮೋದಿ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.
ಸೆಪ್ಟೆಂಬರ್ 20ರಂದು ಜಾರ್ಖಂಡ್ ವಿಧಾನಸಭಾ ಕ್ಷೇತ್ರದ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲೂ ಮೋದಿ ಪಾಲ್ಗೊಂಡಿದ್ದರು.
ಇದೇ ವೇಳೆ ಡಿಯೊಗರ್ ನಿಂದ 80 ಕಿ.ಮೀ. ದೂರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಅನ್ನು 45 ನಿಮಿಷ ಹಾರಲು ಅವಕಾಶ ನೀಡಲಿಲ್ಲ. ಡಿಯೋಗರ್ ನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಅಡ್ಡಿಪಡಿಸಲು ಹೆಲಿಕಾಫ್ಟರ್ ಹಾರಾಟವನ್ನು 45 ನಿಮಿಷ ತಡೆ ಹಿಡಿಯಲಾಯಿತು ಎಂದು ಕಾಂಗ್ರೆಸ್ ಆರೋಪಿಸಿದೆ.