ಮೊಬೈಲ್ ಗೀಳಿಗೆ ಬಿದ್ದು ಓದಿನಲ್ಲಿ ಹಿಂದೆ ಬಿದ್ದಿದ್ದ ಮಗನನ್ನು ಗೋಡೆಗೆ ತಲೆ ಚಚ್ಚಿ ತಂದೆಯೇ ಕೊಲೆಗೈದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಶುಕ್ರವಾರ ನಡೆದಿದ್ದು, ತಂದೆ ರವಿ ಕುಮಾರ್ 14 ವರ್ಷದ ಮಗ ತೇಜಸ್ ನನ್ನು ಕೊಲೆಗೈದಿದ್ದೂ ಅಲ್ಲದೇ ಕೊಲೆಯನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ.
ಮದ್ಯ ಸೇವಿಸಿದ ಅಮಲಿನಲ್ಲಿ ಶುಕ್ರವಾರ ರಾತ್ರಿ ಮನೆಗೆ ಬಂದ ರವಿಕುಮಾರ್, ಮಗನ ಜೊತೆ ಮೊಬೈಲ್ ವಿಷಯದಲ್ಲಿ ಗಲಾಟೆ ಆಗಿದೆ. ಆಗ ಕ್ರಿಕೆಟ್ ಬ್ಯಾಟ್ ನಿಂದ ಮಗನನ್ನು ಥಳಿಸಿದ್ದೂ ಅಲ್ಲದೇ ಗೋಡೆಗೆ ತಲೆ ಚಚ್ಚಿ ಕೊಲೆ ಮಾಡಿದ್ದಾನೆ. ಹಲ್ಲೆ ನಡೆಸುವಾಗ ನೀನು ಸತ್ತರೂ ಪರ್ವಾಗಿಲ್ಲ ಎಂದು ಹೇಳಿದ್ದಾನೆ.
ಕುಮಾರಸ್ವಾಮಿ ಲೇಔಟ್ ಬಳಿ ಬಾಲಕನೊಬ್ಬ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದಾಗ ಮನೆಯವರು ತರಾತುರಿಯಲ್ಲಿ ಬಾಲಕನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಮನೆಯಲ್ಲಿನ ಪರಿಸ್ಥಿತಿ ನೋಡಿ ಆಘಾತಗೊಂಡ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಮರಣೋತ್ತರ ಪರೀಕ್ಷೆಯಲ್ಲಿ ಮಗನಿಗೆ ತಲೆ ಹಾಗೂ ದೇಹದ ಒಳಭಾಗದಲ್ಲಿ ಗಾಯ ಹಾಗೂ ರಕ್ತಸ್ರಾವ ಆಗಿರುವುದು ದೃಢಪಟ್ಟಿದೆ.
ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ರವಿ ಕುಮಾರ್, 9ನೇ ತರಗತಿಯಲ್ಲಿ ಓದುತ್ತಿದ್ದ ಮಗ ಓದಿನಲ್ಲಿ ಹಿಂದೆ ಬಿದ್ದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ. ಇದೇ ವೇಳೆ ಮೊಬೈಲ್ ಫೋನ್ ರಿಪೇರಿ ಮಾಡಿಕೊಡುವಂತೆ ಕೇಳಿದಾಗ ಸಿಟ್ಟಿನಲ್ಲಿ ಮಗ ಎಂಬುದನ್ನೇ ಮರೆತು ಮೃಗೀಯ ದಾಳಿ ಮಾಡಿದ್ದಾನೆ.
ಮಗನ ಮೇಲೆ ಹಲ್ಲೆ ಮಾಡಿದ್ದರಿಂದ ರಾತ್ರಿ ಅಸ್ವಸ್ಥಗೊಂಡು ಮಗ ನರಳುತ್ತಿದ್ದರೂ ನೀನು ಸತ್ತರೂ ಪರ್ವಾಗಿಲ್ಲ ಎಂದು ತಂದೆ ನಿರ್ಲಕ್ಷಿಸಿದ್ದಾನೆ. ಇದಕ್ಕೆ ಮನೆಯವರು ಸಾಥ್ ನೀಡಿರುವುದು ಆಘಾತಕಾರಿ ವಿಷಯವಾಗಿದೆ. ಅಲ್ಲದೇ ಮಗ ಉಸಿರಾಡುವುದನ್ನು ನಿಲ್ಲಿಸಿದ ನಂತರವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಗನನ್ನು ಕೊಲೆ ಮಾಡಿದ ನಂತರ ಕೊಲೆಯನ್ನು ಮುಚ್ಚಿ ಹಾಕಲು ಮನೆಯಲ್ಲಿ ಮೆತ್ತಿದ್ದ ರಕ್ತದ ಕಲೆಯನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೇ ಹಲ್ಲೆಗೆ ಬಳಸಿದ್ದ ಬ್ಯಾಟ್ ಮುಚ್ಚಿಟ್ಟಿದ್ದಾರೆ. ಅಲ್ಲದೇ ಸಹಜವಾಗಿ ಮೃತಪಟ್ಟಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ.