Sunday, November 24, 2024
Google search engine
Homeಕಾನೂನುಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು: ಆರೋಪಿಗಳ ತನಿಖೆಗೆ ತಡೆ ನೀಡಲು ಹೈಕೋರ್ಟ್ ತಿರಸ್ಕಾರ!

ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು: ಆರೋಪಿಗಳ ತನಿಖೆಗೆ ತಡೆ ನೀಡಲು ಹೈಕೋರ್ಟ್ ತಿರಸ್ಕಾರ!

ಸುಪಾರಿ ಕೊಟ್ಟು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಹೂಡಿದ್ದ ಆರೋಪದಲ್ಲಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವ ಎಂ.ಎನ್.ಗೋಪಾಲಕೃಷ್ಣ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡುವಂತೆ ಗೋಪಾಲಕೃಷ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿರುವುದರಿಂದ ಆರೋಪಿಗಳು ಇದೀಗ ತನಿಖೆಯನ್ನು ಎದುರಿಸಲೇಬೇಕಾಗಿದೆ.

ಹೆಸರಘಟ್ಟ ಹೋಬಳಿಯ ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಎಂ.ಜಿ. ಉಮಾ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.  ನ್ಯಾಯಾಲಯದ ಆದೇಶದಿಂದಾಗಿ ತನಿಖೆಗೆ ಹಾದಿ ಸುಗಮವಾಗಿದೆ.

ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ “ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖಾಧಿಕಾರಿ ಪೆನ್ ಡ್ರೈವ್, ಪತ್ರ ಸೇರಿದಂತೆ ಸಾಕಷ್ಟು ಸಾಕ್ಷ್ಯವನ್ನು ಸಂಗ್ರಹ ಮಾಡಿದ್ದಾರೆ. ಮೇಲ್ನೋಟಕ್ಕೆ ದೂರಿನಲ್ಲಿ ಆರೋಪಿಯ ವಿರುದ್ಧ ದೂರುದಾರರು ಮಾಡಿರುವ ಆರೋಪಗಳಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂಬುದು ಕಂಡು ಬರುತ್ತಿದೆ’’ ಎಂದು ಹೇಳಿದೆ.

ಅಲ್ಲದೆ, ತನಿಖಾಧಿಕಾರಿಯಿಂದ ವಿಸ್ತೃತ ತನಿಖೆಯಿಂದ ಅರ್ಜಿದಾರರ ವಿರುದ್ಧ ದೂರುದಾರ ವಿಶ್ವನಾಥ್ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಹಾಗಾಗಿ ಈ ಹಂತದಲ್ಲಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ.  ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲವೆಂದು ಅವರ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಾಲಯ ಆದೇಶಿಸಿದೆ.

ಹಿಂದೆ ನ್ಯಾಯಾಲಯ ತಾಂತ್ರಿಕ ಕಾರಣಗಳಿಂದಾಗಿ ಪ್ರಕರಣವನ್ನು ರದ್ದುಗೊಳಿಸಿತ್ತು. ಅದೇ ಆಧಾರದಲ್ಲಿ ಶಾಸಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಹಾಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಆದರೆ ಆ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ವಿಶ್ವನಾಥ್ ಅವರ ಪರ ವಕೀಲರಾದ ಅರುಣ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ

ಆರೋಪಿ ಎಂ.ಎನ್.ಗೋಪಾಲಕೃಷ್ಣ ಹಾಗೂ ಮತ್ತೋರ್ವ ವ್ಯಕ್ತಿ ವಿಶ್ವನಾಥ್ ಅವರನ್ನು ಮುಗಿಸುವುದಾಗಿ ಮಾತನಾಡಿದ್ದ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಆಧರಿಸಿ ವಿಶ್ವನಾಥ್ 2021ರ ಡಿ.1ರಂದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ, 506ರಡಿ ದೂರು ದಾಖಲಿಸಿದ್ದರು. ಆ ದೂರು ಸಲ್ಲಿಸಿದ ದಿನವೇ ಶಾಸಕರ ಕಚೇರಿಗೆ ಒಂದು ಲಕೋಟೆ ಬಂದಿತ್ತು, ಅದರಲ್ಲಿ ಪೆನ್ ಡ್ರೈವ್ ಹಾಗೂ ಬೆದರಿಕೆ ಪತ್ರವಿತ್ತು. ಪೊಲೀಸರು ತನಿಖೆಗಾಗಿ ಅದನ್ನು ವಶಕ್ಕೆ ಪಡೆದುಕೊಂಡಿದ್ದರು.

ದೂರನ್ನು ರದ್ದುಗೊಳಿಸುವಂತೆ ಕೋರಿ ಗೋಪಾಲಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ನ್ಯಾಯಾಲಯ 2022ರ ಸೆ.27ರಂದು ಅರ್ಜಿಯನ್ನು ಮಾನ್ಯ ಮಾಡಿ ತಾಂತ್ರಿಕ ಕಾರಣಗಳಿಂದಾಗಿ ದೂರು ಸಲ್ಲಿಸಿರುವ ಪ್ರಕ್ರಿಯೆ ಸರಿಯಾಗಿಲ್ಲ. ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ. ಆದರೆ ಅರ್ಜಿದಾರರು ಹೊಸದಾಗಿ ದೂರು ಸಲ್ಲಿಸಲು ಸ್ವತಂತ್ರರು ಎಂದು ಆದೇಶ ನೀಡಿತ್ತು.

ಆನಂತರ ವಿಶ್ವನಾಥ್ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಆದರೆ ಪೊಲೀಸರು ಆ ದೂರು ಸ್ವೀಕರಿಸಲು ನಿರಾಕರಿಸಿದರು. ಹಾಗಾಗಿ ಸಾಕ್ಷ್ಯಗಳನ್ನು ಆಧರಿಸಿ ವಿಶ್ವನಾಥ್, ಗೋಪಾಲಕೃಷ್ಣ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ವಿರುದ್ಧ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಹಾಗಾಗಿ ಗೋಪಾಲಕೃಷ್ಣ ತನಿಖೆಗೆ ತಡೆ ನೀಡಬೇಕು ಮತ್ತು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments