ಆಸ್ಟ್ರೇಲಿಯಾದ ದಾಳಿಗೆ ರನ್ ಗಳಿಸಲು ಪರದಾಡಿದ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗೆ ಆಲೌಟಾಗಿದೆ.
ಪರ್ತ್ ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಚಹಾ ವಿರಾಮಕ್ಕೂ ಮುನ್ನವೇ ಮೊದಲ ಇನಿಂಗ್ಸ್ ನಲ್ಲಿ 49.4 ಓವರ್ ಗಳಲ್ಲಿ 150 ರನ್ ಗೆ ಪತನಗೊಂಡಿತು.
ಜಸ್ ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ತಂಡದಲ್ಲಿ ಹಲವಾರು ಬದಲಾವಣೆ ಮಾಡಲಾಗಿತ್ತು. ಅನುಭವಿಗಳಾದ ಅಶ್ವಿನ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್ ಸೇರಿದಂತೆ ಹಲವು ಆಟಗಾರರನ್ನು ಕೈಬಿಟ್ಟು, ಟೆಸ್ಟ್ ಅನುಭವ ಇಲ್ಲದ ದೇವದತ್ ಪಡಿಕಲ್, ಧ್ರುವ ಜುರೆಲ್, ನಿತಿಶ್ ರೆಡ್ಡಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿತು.
ಯಶಸ್ವಿ ಜೈಸ್ವಾಲ್ (0) ಮತ್ತು ದೇವದತ್ ಪಡಿಕಲ್ (0) ಇಬ್ಬರೂ ಖಾತೆ ತೆರೆಯದೇ ನಿರ್ಗಮಿಸಿ ಆಘಾತ ನೀಡಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ [5] ನೆಲೆ ಕಂಡುಕೊಳ್ಳುವ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು.
ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 74 ಎಸೆತಗಳಲ್ಲಿ 3 ಬೌಂಡರಿ ಸಹಿತ 26 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರಿಂದ ತಂಡದ ಪೆವಿಲಿಯನ್ ಪರೇಡ್ ಮುಂದುವರಿಯಿತು.
ಧ್ರುವ ಜುರೆಲ್ [11], ವಾಷಿಂಗ್ಟನ್ ಸುಂದರ್ [4] ಔಟಾದಾಗ ಭಾರತದ ಮೊತ್ತ 73 ರನ್ ಗೆ 6 ವಿಕೆಟ್ ಆಗಿತ್ತು. ಈ ಹಂತದಲ್ಲಿ ಭಾರತ 100ರ ಗಡಿ ದಾಟುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ರಿಷಭ್ ಪಂತ್ ಮತ್ತು ನಿತಿಶ್ ಕುಮಾರ್ ರೆಡ್ಡಿ 7ನೇ ವಿಕೆಟ್ ಗೆ 48 ರನ್ ಜೊತೆಯಾಟ ನಿಭಾಯಿಸುವ ಮೂಲಕ ಪ್ರತಿರೋಧ ಒಡ್ಡಿದರು. ಆದರೆ 78 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ೩೭ ರನ್ ಗಳಿಸಿದ್ದಾಗ ಪಂತ್ ಔಟಾಗುತ್ತಿದ್ದಂತೆ ತಂಡ ನಾಟಕೀಯ ಕುಸಿತ ಕಂಡಿತು.
ನಿತೀಶ್ ಕುಮಾರ್ ರೆಡ್ಡಿ 59 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 41 ರನ್ ಬಾರಿಸಿ ಕೊನೆಯವರಾಗಿ ಔಟಾದರು.
ಆಸ್ಟ್ರೇಲಿಯಾ ಪರ ಹಾಜ್ಲೆವುಡ್ 4 ವಿಕೆಟ್ ಪಡೆದು ಮಿಂಚಿದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಗಳಿಸಿದರು. ಅನುಭವಿ ನಾಥನ್ ಲಿಯೊನ್ ವಿಕೆಟ್ ಇಲ್ಲದೇ ನಿರಾಸೆ ಅನುಭವಿಸಿದರು.