ಭಾರತದ ಆರಂಭಿಕ ಜೋಡಿಯಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆಸ್ಟ್ರೇಲಿಯಾ ನೆಲದಲ್ಲಿ 77 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.
ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಜೈಸ್ವಾಲ್ ಮತ್ತು ರಾಹುಲ್ ಮೊದಲ ವಿಕೆಟ್ ಗೆ 201 ರನ್ ಜೊತೆಯಾಟ ನಿಭಾಯಿಸಿದ್ದಾರೆ. ಈ ಮೂಲಕ ಇವರಿಬ್ಬರು ಆಸ್ಟ್ರೇಲಿಯಾದಲ್ಲಿ 1986ರಲ್ಲಿ ಸುನೀಲ್ ಗವಾಸ್ಕರ್ ಮತ್ತು ಶ್ರೀಕಾಂತ್ ಮೊದಲ ವಿಕೆಟ್ ಗೆ 191 ರನ್ ಜೊತೆಯಾಟ ನಿಭಾಯಿಸಿದ ದಾಖಲೆ ಮುರಿದಿದ್ದಾರೆ.
2013ರಲ್ಲಿ ಭಾರತದ ಪರ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಮೊದಲ ವಿಕೆಟ್ ಗೆ 289 ರನ್ ಗಳಿಸಿರುವುದು ಅಲಾನ್ ಬಾರ್ಡರ್- ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಟೆಸ್ಟ್ ಸರಣಿಯಲ್ಲಿ ಅತೀ ದೊಡ್ಡ ಜೊತೆಯಾಟವಾಗಿದೆ. ಇವರಿಬ್ಬರು ಮೈಕಲ್ ಕ್ಲಾರ್ಕ್ ನೇತೃತ್ವದ ತಂಡದ ವಿರುದ್ಧ ಮೊಹಾಲಿಯಲ್ಲಿ ದಾಖಲೆ ಜೊತೆಯಾಟ ನಿಭಾಯಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್ ಹೊರತುಪಡಿಸಿದ ತಂಡದಿಂದ ಬಂದ ಅತೀ ದೊಡ್ಡ ಮೊದಲ ವಿಕೆಟ್ ಜೊತೆಯಾಟವಾಗಿದೆ. 1912ರಲ್ಲಿ ಇಂಗ್ಲೆಂಡ್ ಪರ ಜಾಕ್ ಹಾಬ್ಸ್ ಮತ್ತು ವಿಲ್ಫೆಡ್ ರೋಡ್ಸ್ 323 ರನ್ ಜೊತೆಯಾಟ ನಿಭಾಯಿಸಿರುವುದು ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ.
ಒಟ್ಟಾರೆ ವಿದೇಶೀ ನೆಲದಲ್ಲಿ ಬಂದ ಮೂರನೇ ಅತೀ ದೊಡ್ಡ ಜೊತೆಯಾಟ ನಿಭಾಯಿಸಿದ ಗೌರವಕ್ಕೆ ಜೈಸ್ವಾಲ್-ರಾಹುಲ್ ಪಾತ್ರರಾಗಿದ್ದಾರೆ. ರಾಹುಲ್ ಮತ್ತು ಜೈಸ್ವಾಲ್ 63 ಓವರ್ ಗಳನ್ನು ಎದುರಿಸಿ 201 ರನ್ ಜೊತೆಯಾಟ ನಿಭಾಯಿಸಿದರು. ರಾಹುಲ್ 176 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 77 ರನ್ ಬಾರಿಸಿ ಮೊದಲಿಗರಾಗಿ ಔಟಾದರೆ, ಜೈಸ್ವಾಲ್ 297 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 161 ರನ್ ಗಳಿಸಿದರು.