ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಬುಧಾಬಿಯಲ್ಲಿ ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ಮೂಲಧನ ಹೊಂದಿದ್ದ ರಿಷಭ್ ಪಂತ್ 27 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
ರಿಷಭ್ ಪಂತ್ ಖರೀದಿಗೆ ಫ್ರಾಂಚೈಸಿಗಳು ಪೈಪೋಟಿ ಮಾಡಿದ್ದು, ಆರಂಭದಲ್ಲಿ ಉತ್ಸಾಹ ತೋರಿದ ಆರ್ ಸಿಬಿ ನಂತರ ಹಿಂದೆ ಸರಿದರೆ ನಂತರ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ಏರ್ಪಟ್ಟಿತು.
ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ 20.50 ಕೋಟಿ ರೂ.ಗೆ ಖರೀದಿಸಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ರೈ ಟು ಮ್ಯಾಚ್ ಕಾರ್ಡ್ ಬಳಸಿದಾಗ ಬಿಡ್ ಮಾಡುವ ಅಂತಿಮ ಮೊತ್ತ ಘೋಷಿಸಲು ಹೇಳಿದಾಗ ಲಕ್ನೂ ಸೂಪರ್ ಜೈಂಟ್ಸ್ 27 ಕೋಟಿ ರೂ. ಘೋಷಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಹಿಂದೆ ಸರಿದಿದ್ದರಿಂದ ಅಂತಿಮವಾಗಿ 27 ಕೋಟಿಗೆ ಎಲ್ ಎಸ್ ಜಿ ಪಾಲಾದರು. ಅಲ್ಲದೇ ಐಪಿಎಲ್ ನ ಅತ್ಯಂತ ದುಬಾರಿ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.