ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದ ಕಾರಣ ಉಭಯ ಸದನಗಳ ಕಲಾಪವನ್ನು ಮುಂದೂಡಲಾಗಿದೆ.
ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ವಕ್ಫ್ ಮಂಡಳಿ ವಿವಾದ ಹಾಗೂ ಮಣಿಪುರ ಗಲಭೆ ಕುರಿತು ಚರ್ಚೆಗೆ ಆಗ್ರಹಿಸಿದವು. ಈ ವಿಷಯದಲ್ಲಿ ವಾಗ್ವಾದ ಆರಂಭಗೊಂಡಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ೨೭ರವರೆಗೆ ಮುಂದೂಡಲಾಗಿದೆ.
ಕೇಂದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆ, ಬ್ಯಾಕಿಂಗ್ ಮಸೂದೆ ಮತ್ತು ರೈಲ್ವೆ ವಿಧೇಯಕ ತಿದ್ದುಪಡಿ ಮಸೂದೆ, ವಕ್ಫ್ ಮಂಡಳಿ ಮಸೂದೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ತರಾತರಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಪ್ರತಿಪಕ್ಷಗಳು ಯಾವುದೇ ಮಸೂದೆ ಮಂಡನೆ ಮಾಡುವ ಮುನ್ನ ಮಣಿಪುರದಲ್ಲಿ ಮರುಕಳಿಸಿರುವ ಹಿಂಸಾಚಾರ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದವು. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಗದ್ಧಲ ಸೃಷ್ಟಿಸಿದ್ದರಿಂದ ಕಲಾಪವನ್ನು ಮುಂದೂಡಲಾಗಿದೆ.
ಲೋಕಸಭೆ ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳು ಕಲಾಪವನ್ನು ಹಾಳು ಮಾಡಲು ಪ್ರಯತ್ನಿಸಲಿವೆ. ಜನರಿಂದ ತಿರಸ್ಕೃತಗೊಂಡವರು ಲೋಕಸಭೆಯಲ್ಲಿ ಆಡಳಿತ ಪಕ್ಷವನ್ನು ಅಧೀರರನ್ನಾಗಿ ಮಾಡಲು ಪ್ರಯತ್ನಿಸಬಾರದು ಎಂದು ಕರೆ ನೀಡಿದ್ದರು.