ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಕಾಂಗರೂ ನೆಲದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.
ಪರ್ತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 534 ರನ್ ಗಳ ಕಠಿಣ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ತಂಡ ನಾಲ್ಕನೇ ದಿನವಾದ ಸೋಮವಾರ ಚಹಾ ವಿರಾಮಕ್ಕೂ ಮುನ್ನವೇ 238 ರನ್ ಗೆ ಆಲೌಟಾಯಿತು. ಈ ಮೂಲಕ ಭಾರತ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 12 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಆಸ್ಟ್ರೇಲಿಯಾ ಸೋಮವಾರ ಆಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಇನ್ನೆರಡು ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.
ಒಂದು ಹಂತದಲ್ಲಿ ಆಸ್ಟ್ರೇಲಿಯಾ 79 ರನ್ ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಈ ಹಂತದಲ್ಲಿ ಟ್ರಾವಿಡ್ ಹೆಡ್ ಮತ್ತು ಮಿಚೆಲ್ ಮಾರ್ಷ್ 6ನೇ ವಿಕೆಟ್ ಗೆ 82 ರನ್ ಜೊತೆಯಾಟ ನಿಭಾಯಿಸಿ ತಂಡಕ್ಕೆ ಚೇತರಿಕೆ ನೀಡಿದರು.
101 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 81 ರನ್ ಗಳಿಸಿದ್ದಾಗ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಜಸ್ ಪ್ರೀತ್ ಬುಮ್ರಾ ಪಂದ್ಯ ಭಾರತದ ಕಡೆ ವಾಲುವಂತೆ ಮಾಡಿದರು. ಮಿಚೆಲ್ ಮಾರ್ಷ್ 67 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 47 ರನ್ ಗಳಿಸಿ ನಿರ್ಗಮಿಸಿದರು.
ಭಾರತದ ಪರ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ ತಲಾ 3 ವಿಕೆಟ್ ಉರುಳಿಸಿದರೆ, ವಾಷಿಂಗ್ಟನ್ ಸುಂದರ್ 2 ಮತ್ತು ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.