ಬೆಂಗಳೂರು: ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿದ್ದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಹಲವು ಅಚ್ಚರಿಗಳೇ ನಡೆದಿವೆ.
ಹರಾಜಿನಲ್ಲಿದ್ದ ಕರ್ನಾಟಕ ಮೂಲದ 24 ಆಟಗಾರರ ಪೈಕಿ 13 ಮಂದಿ ವಿವಿಧ ತಂಡಗಳ ಪಾಲಾಗಿದ್ದಾರೆ. ಹಿಂದಿನ ಸಾಲುಗಳಿಗೆ ಹೋಲಿಸಿದರೆ ಈ ಬಾರಿ ಕನ್ನಡಿಗರಿಗೆ ಹರಾಜಿನಲ್ಲಿ ಹೆಚ್ಚಿನ ಮಹತ್ವ ಸಿಗದಿರುವುದು ಬೇಸರದ ಸಂಗತಿ. ಕರ್ನಾಟಕ ಮೂಲದ 24 ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
ಕೆ.ಎಲ್.ರಾಹುಲ್ (ಡೆಲ್ಲಿ-13 ಕೋಟಿ ರೂ.), ಪ್ರಸಿದ್ಧ್ ಕೃಷ್ಣ (ಗುಜರಾತ್-9,.50 ಕೋಟಿ ರೂ.), ಕರುಣ್ ನಾಯರ್ (ಡೆಲ್ಲಿ-50 ಲಕ್ಷ ರೂ.), ಮನೀಶ್ ಪಾಂಡೆ (ಕೋಲ್ಕತ್ತಾ-75 ಲಕ್ಷ ರೂ.), ವೈಶಾಖ್ ವಿಜಯ್ ಕುಮಾರ್ (ಪಂಜಾಬ್-1.80 ಕೋಟಿ ರೂ.), ಶ್ರೀಜಿತ್ ಕೃಷ್ಣನ್ (ಮುಂಬೈ -30 ಲಕ್ಷ ರೂ.), ಮನೋಜ್ ಭಾಂಡಗೆ (ಆರ್‌ಸಿ-30 ಲಕ್ಷ ರೂ.), ದೇವದತ್ ಪಡಿಕ್ಕಲ್ (ಆರ್ ಸಿಬಿ- 2 ಕೋಟಿ ರೂ.), ಅಭಿನವ್ ಮನೋಹರ್ (ಹೈದರಾಬಾದ್- 3.20 ಕೋಟಿ ರೂ.), ಲವನೀತ ಸಿಸೋಡಿಯಾ (ಕೆಕೆಆರ್), ಪ್ರವೀಣ್ ದುಬೆ (ಪಂಜಾಬ್ ಕಿಂಗ್ಸ್). ಶ್ರೇಯಸ್ ಗೋಪಾಲ್ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಮನ್ವಂತ್ ಕುಮಾರ್ (ಡೆಲ್ಲಿ ಕ್ಯಾಪಿಟಲ್ಸ್)
ಮಾಯಂಕ್‌ಗೆ ನಿರಾಸೆ
ಕರ್ನಾಟಕ ರಣಜಿ ತಂಡ ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅವರನ್ನು ಮೆಗಾ ಹರಾಜಿನಲ್ಲಿ ಕೊಂಡುಕೊಳ್ಳಲು ಫ್ರಾಂಚೈಸಿಗಳು ನಿರಾಸಕ್ತಿ ತೋರಿದವು. ಈ ಹಿಂದಿನ ಆವೃತ್ತಿಗಳಲ್ಲಿ ಹೈದರಾಬಾದ್, ಪುಣೆ, ಡೆಲ್ಲಿ ಡೇರ್ ಡೆವಿಲ್ಸ್, ಪಂಜಾಬ್ ತಂಡದಲ್ಲಿ ಬ್ಯಾಟ್ ಬೀಸಿದ್ದರು. ಈ ಬಾರಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದರು. ಆದರೆ ಅವರನ್ನು ಕೊಂಡುಕೊಳ್ಳಲು ಯಾರು ಮುಂದೆ ಬಾರಲಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ 23 ಆಟಗಾರರ ಬಳಗದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ಡಿಸಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.