ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ತಂಡವನ್ನು ಸೆಳೆಯಲು ವಿಫಲರಾಗಿದ್ದ ಗುಜರಾತ್ ನ ಉರ್ಮಿಲ್ ಪಟೇಲ್ ಟಿ-20 ಕ್ರಿಕೆಟ್ ನಲ್ಲಿ 2ನೇ ಅತೀ ವೇಗದ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಉರ್ಮಿಲ್ ಪಟೇಲ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಫ್ರಾಂಚೈಸಿಗಳು ಐಪಿಎಲ್ ನಲ್ಲಿ ಖರೀದಿಸದೇ ಅನ್ ಸೋಲ್ಡ್ ಆಟಗಾರ ಮಾಡಿದ್ದಕ್ಕೆ ಬ್ಯಾಟ್ ಮೂಲಕ ತಿರುಗೇಟು ನೀಡಿದರು.
ಇಂದೋರ್ ನಲ್ಲಿ ಬುಧವಾರ ನಡೆದ ತ್ರಿಪುರ ವಿರುದ್ಧ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ದೆಹಲಿ ಪರ ಆಡಿದ್ದ ರಿಷಭ್ ಪಂತ್ ೨೦೧೮ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ ೩೨ ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಉರ್ಮಿಲ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 12 ಸಿಕ್ಸರ್ ನೊಂದಿಗೆ 113 ರನ್ ಬಾರಿಸಿ ಔಟಾಗದೇ ಉಳಿದರು. ಈ ಮೂಲಕ ಗುಜರಾತ್ 58 ಎಸೆತಗಳು ಬಾಕಿ ಇರುವಂತೆಯೇ 156 ರನ್ ಗಳ ಗುರಿಯನ್ನು ಸುಲಭವಾಗಿ ತಲುಪಿ ಗೆಲುವು ದಾಖಲಿಸಿತು.
ಉರ್ಮಿಲ್ ಪಟೇಲ್ ಟಿ-20ಯಲ್ಲಿ 2ನೇ ಅತ್ಯಂತ ವೇಗದ ಶತಕ ಬಾರಿಸಿದ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ಇಥಿಯೋಪಿಯಾದ ಸಾಹಿಲ್ ಚೌಹಾಣ್ ಸೈಪ್ರಸ್ ವಿರುದ್ಧ 27 ಎಸೆತಗಳಲ್ಲಿ ಶತಕ ಬಾರಿಸಿರುವುದು ದಾಖಲೆಯಾಗಿ ಉಳಿದಿದೆ. ಕ್ರಿಸ್ ಗೇಲ್ 30 ಎಸೆತಗಳಲ್ಲಿ ಆರ್ ಸಿಬಿ ವಿರುದ್ಧ ಶತಕ ಸಿಡಿಸಿರುವುದು ಮೂರನೇ ಸ್ಥಾನದಲ್ಲಿದ್ದಾರೆ.
ಇದಕ್ಕೂ ಮುನ್ನ ಉರ್ಮಿಲ್ ಅರುಣಾಚಲ ಪ್ರದೇಶ ವಿರುದ್ಧ 41 ಎಸೆತಗಳಲ್ಲಿ ಶತಕ ಪೂರೈಸಿದ ದಾಖಲೆ ಬರೆದಿದ್ದರು. ಈ ಶತಕದ ಹೊರತಾಗಿಯೂ ಉರ್ಮಿಲ್ ಅವರನ್ನು ಹರಾಜಿನಲ್ಲಿ ಯಾವುದೇ ತಂಡ ಖರೀದಿಸಿರಲಿಲ್ಲ.