Thursday, December 25, 2025
Google search engine
Homeರಾಜ್ಯಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ?

ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ?

ಬಿಸಿತುಪ್ಪವಾಗಿರುವ ಉದ್ಯಮಿ ದೈತ್ಯ ಗೌತಮಿ ಅದಾನಿ ಜೊತೆ ಅಂತರ ಕಾಯ್ದುಕೊಂಡಿರುವ ಬಿಜೆಪಿ ಸಂಪೂರ್ಣ ಬಾಂಧವ್ಯ ಕಡಿದುಕೊಳ್ಳಲು ಚಿಂತನೆ ನಡೆಸಿದೆ.

ದೇಶದ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯಿಂದ ಮುಜುಗರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಅವರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆಡಳಿತಾರೂಢ ಬಿಜೆಪಿ ಅದಾನಿಯನ್ನು ಸಮರ್ಥಿಸಿಕೊಳ್ಳದೇ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಸಂಸತ್ತಿನ ಹೊರಗೆ ಇಂದು ಕೂಡಾ ವಿಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಗೌತಮ್ ಅದಾನಿ ವಿರುದ್ದ ಕಿಡಿಕಾರಿದ್ದಾರೆ. ಅದಾನಿ ತಮ್ಮ ಮೇಲಿರುವ ಆಪಾದನೆಗಳನ್ನು ಸಮರ್ಥಿಸಿಕೊಳ್ಳಲೇಬೇಕು, ಅವರಿಗೆ ಬೇರೆ ಆಯ್ಕೆಯಿಲ್ಲ. ಆದರೆ, ಸರ್ಕಾರ ಅವರನ್ನು ಬಂಧಿಸಬಹುದಲ್ಲವೇ, ಅದಾನಿಯನ್ನು ಸರ್ಕಾರವೇ ರಕ್ಷಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಅದಾನಿ ವಿಚಾರದಲ್ಲಿ ಮಾತನಾಡಿದ ಬಿಜೆಪಿ ನಾಯಕರು, ನಾವು ಯಾವ ಕಾರಣಕ್ಕಾಗಿ ಅವರನ್ನು ಸಮರ್ಥಿಸಿಕೊಳ್ಳಬೇಕು. ವಿರೋಧ ಪಕ್ಷದ ನಾಯಕರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲೂ ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಇದು, ಸದನದಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಭಾಪತಿ ನಡುವೆ ವಾಗ್ಯುದ್ದಕ್ಕೆ ಕಾರಣವಾಗಿತ್ತು.

ಲೋಕಸಭೆಯಲ್ಲಿ ಅದಾನಿ ಮತ್ತು ಅವರ ಮೇಲೆ ಹೊರಡಿಸಲಾಗಿರುವ ಅಮೆರಿಕಾದ ವಾರೆಂಟ್ ಗೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರು, ಸ್ಪೀಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಎಲ್ಲ ಬೆಳವಣಿಗೆಗೆಳ ಹಿನ್ನಲೆಯಲ್ಲಿ, ಅದಾನಿ ಅವರನ್ನು ಅವರೇ ಸಮರ್ಥಿಸಿಕೊಳ್ಳಲಿ ಎಂದು ಬಿಜೆಪಿ ಅಂತರವನ್ನು ಕಾಯ್ದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ಮೋದಿ ಮತ್ತು ಬಿಜೆಪಿ ಪಾರ್ಟಿಯು ಉದ್ಯಮಿ ಗೌತಮ್ ಅದಾನಿಯವರನ್ನು ರಕ್ಷಿಸುತ್ತಿದೆ. ಬಿಜೆಪಿಗೆ ಅದಾನಿ ಕಂಪೆನಿಗಳಿಂದ ಪಾರ್ಟಿ ಫಂಡ್ ಹೋಗುತ್ತಿದೆ. ಜೆಪಿಸಿ ಮೂಲಕ ತನಿಖೆ ನಡೆಯಲಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಅದಾನಿ ವಿರುದ್ದ ತನಿಖೆಯಾಗಬೇಕೆಂದು ಪ್ರತಿಭನೆಯನ್ನು ನಡೆಸುತ್ತಿದ್ದಾರೆ.

ಬಿಜೆಪಿಗೂ ಅದಾನಿ ಮೇಲಿನ ಆರೋಪಕ್ಕೂ ಒಂದಕ್ಕೊಂದು ಸಂಬಂಧವಿಲ್ಲ, ನಾವೇಕೆ ಅವರನ್ನು ರಕ್ಷಿಸಿಕೊಳ್ಳುವ ಕೆಲಸ ಮಾಡಬೇಕು. ತಮ್ಮ ಮೇಲಿರುವ ಆಪಾದನೆ ಸುಳ್ಳೆಂದಾದರೆ ಕಾನೂನಾತ್ಮಕವಾಗಿ ಅವರು ಹೋರಾಟ ನಡೆಸಲಿ ಎಂದು ಬಿಜೆಪಿ ವಕ್ತಾರ ಗೋಪಾಲ್ ಕೃಷ್ಣ ಅಗರ್ವಾಲ್ ಹೇಳಿದ್ದಾರೆ.

ನಾವು ಉದ್ಯಮಿಗಳವಿರುದ್ದವೂ ಇಲ್ಲ, ಕೈಗಾರಿಕೋದ್ಯಮಿಗಳು ಎಂದರೆ ನಮ್ಮ ಪ್ರಕಾರ ದೇಶವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಲು ಸಹಕಾರ ನೀಡುವವರು.  ಆದರೆ, ಕಾನೂನು ತನ್ನ ಕೆಲಸವನ್ನು ತನ್ನದೇ ಚೌಕಟ್ಟಿನಲ್ಲಿ ನಡೆಸುತ್ತದೆ ಎಂದು ಬಿಜೆಪಿ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments