ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದ್ದು, ಇದರಿಂದ ಪ್ರತಿ 3 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲುಗಳ ಸಂಚಾರ ಮಾಡಲಿದೆ. ಇದರಿಂದ ಬೆಂಗಳೂರಿನ ಪ್ರಯಾಣಿಕರ ಕಾಯುವಿಕೆ ಒತ್ತಡ ತಗ್ಗಲಿದೆ.
ನಮ್ಮ ಮೆಟ್ರೋದಲ್ಲಿ ಪ್ರಸ್ತುತ 57 ಮೆಟ್ರೋ ರೈಲು ಕಾರ್ಯ ನಿರ್ವಹಿಸುತ್ತಿವೆ. ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಎರಡು ರೈಲುಗಳನ್ನು ತುರ್ತು ಪರಿಸ್ಥಿತಿಗಾಗಿ ಮೀಸಲಿಡಲಾಗಿದೆ.
ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ವೇಳೆ 78 ರೈಲು ಒದಗಿಸ ಕುರಿತು ಒಪ್ಪಂದ ಆಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳು ಹಳಿಗೆ ಇಳಿಯುವುದರಿಂದ ಈಗಿನ ಸಮಯದ ಅಂತರವನ್ನು ಇನ್ನಷ್ಟು ಕಡಿಮೆ ಮಾಡಿ ಪ್ರತಿ 3 ರಿಂದ 3:05 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲಿವೆ. ಇದು ಪೀಕ್‌ಟೈಮ್‌ನಲ್ಲಿ ಪ್ರಯಾಣಿಕರ ಒತ್ತಡವನ್ನು ತಪ್ಪಿಸಲು ಅನುಕೂಲ ಆಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಪ್ರತಿ 5 ನಿಮಿಷಗಳಿಗೆ ಒಂದರಂತೆ ಮೆಟ್ರೋ ಸಂಚಾರ ಮಾಡುತ್ತಿದ್ದು, ಹೊಸ ರೈಲುಗಳು ಸೇರ್ಪಡೆಯಾದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ಮೆಟ್ರೋ ಸಂಚಾರ ಮಾಡಲಿದೆ.
ಜನವರಿಯಿಂದ ಹಂತಹಂತವಾಗಿ 21 ಹೊಸ ಮೆಟ್ರೋ ರೈಲುಗಳು ಹಸಿರು ಮತ್ತು ನೇರಳೆ ಮಾರ್ಗಕ್ಕೆ ಬರುವುದರಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ನೆರವಾಗಲಿದೆ.
ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ. ಇದರಲ್ಲಿ ಹಸಿರು ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್ ಬೋರ್ಡ್ ಹಾಗೂ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಪ್ರತಿನಿತ್ಯ ಸರಾಸರಿ 7 ಲಕ್ಷ ಪ್ರಯಾಣಿಕರು ಮೆಟ್ರೋಸೇವೆಯ ಉಪಯೋಗ ಪಡೆಯುತ್ತಿದ್ದಾರೆ.