ಚೆನ್ನೈ: ಫೆಂಗಲ್ ಚಂಡಮಾರುತ ಶನಿವಾರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಯ ಕಾರೈಕಲ್ ಮತ್ತು ಮಹಾಬಲೀಪುರಂ ನಡುವೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಚಂಡಮಾರುತ 30ರಂದು ಬೆಳಿಗ್ಗೆ ಕಾರೈಕಲ್ ಮತ್ತು ಮಹಾಬಲೀಪುರಂ ಕರಾವಳಿ ಮಧ್ಯೆ ಅಪ್ಪಳಿಸಲಿದೆ ಎಂದು ವರದಿ ತಿಳಿಸಿದೆ.
ಅದಕ್ಕೆ ಮುನ್ನ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಗಾಳಿ ಗಂಟೆಗೆ 85 ಕಿ.ಮೀ ವೇಗದಲ್ಲಿ ಬೀಸಲಿದ್ದು, ಕಡಿಮೆ ಒತ್ತಡ ಪ್ರದೇಶ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಶಾಲೆಗಳಿಗೆ ರಜೆ: ಚಂಡಮಾರುತ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪುದುಚೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಪುದುಚೇರಿ ಶಿಕ್ಷಣ ಸಚಿವ ಅರುಮುಗಂ ನಮಸ್ಶಿವಾಯಂ ಮಾಹಿತಿ ನೀಡಿದ್ದಾರೆ.
ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್, ನಾಗಪಟ್ಟಣಂ, ಚೆನ್ನೈ, ಚೆಂಗಲ್ಪೇಟ್, ಅರಿಯಲೂರ್ ಮತ್ತು ಕಾಂಚೀಪುರಂಗಳಲ್ಲಿಯೂ ಶಾಲೆಗೆ ರಜೆ ಘೋಷಿಸಲಾಗಿದೆ. ಮುಂದಿನ ಎರಡು ದಿನದಲ್ಲಿ ತೀವ್ರವಾಗಲಿರುವ ಚಂಡಮಾರುತವನ್ನು ಎದುರಿಸಲು ನೌಕಾಪಡೆ ಸಜ್ಜಾಗಿದೆ.
ಪೂರ್ವ ನೌಕಾ ಕಮಾಂಡ್ ಪ್ರಧಾನ ಕಚೇರಿ, ತಮಿಳುನಾಡು ಮತ್ತು ಪುದುಚೇರಿ ನೌಕಾ ಕಚೇರಿಯ ಆದೇಶದಂತೆ ಈಗಾಗಲೇ ವಿಪತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸಕ್ರಿಯಗೊಂಡಿದೆ. ನೆರವು ಮತ್ತು ವಿಪತ್ತು ಪರಿಹಾರ, ಶೋಧ ಕಾರ್ಯಕ್ಕೆ ಪಡೆಗಳು ಸಜ್ಜಾಗಿವೆ. ಹಾಗೆಯೇ, ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಡೈವಿಂಗ್ ತಂಡಗಳು ಸನ್ನದ್ಧವಾಗಿದ್ದು, ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಲಿವೆ.
ತುರ್ತು ಪರಿಸ್ಥಿತಿ ನಿರ್ವಹಿಸಲು ಆಹಾರ, ನೀರು ಮತ್ತು ಔಷಧಗಳಂತಹ ಅಗತ್ಯ ವಸ್ತುಗಳ ಪೂರೈಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೆಲ್ಲೋ, ಆರೆಂಜ್ ಅಲರ್ಟ್: ಪ್ರಾದೇಶಿಕ ಹವಾಮಾನ ಕೇಂದ್ರ ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಆಲರ್ಟ್ ಘೋಷಿಸಿದೆ. ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.