ಕೇವಲ 6 ದಿನಗಳ ಅಂತರದಿಂದ ಅತ್ಯಂತ ವೇಗದ 2ನೇ ಶತಕ ಸಿಡಿಸಿದ ಗುಜರಾತ್ ನ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
ಸೈಯದ್ ಮುಷ್ತಕ್ ಅಲಿ ಟಿ-20ಕ್ರಿಕೆಟ್ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಉತ್ತರಾಖಂಡ್ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ 40 ಎಸೆತದಲ್ಲಿ 2 ಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ತ್ರಿಪುರ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ 26 ಎಸೆತಗಳಲ್ಲಿ ಶತಕ ಸಿಡಿಸಿ ಟಿ-20ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದ ಉರ್ಮಿಲ್ ಪಟೇಲ್ ಇದೀಗ 36 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ವಿಶೇಷ ಅಂದರೆ ಕಳೆದ ವಾರವೂ ಇದೇ ಹೈಸ್ಕೂಲ್ ಮೈದಾನದಲ್ಲಿ ಉರ್ವಿಲ್ ಪಟೇಲ್ ಶತಕ ಗಳಿಸಿದ್ದರು.
ಉರ್ವಿಲ್ ಕಳೆದ ವಾರದ ಪಂದ್ಯದಲ್ಲಿ 35 ಎಸೆತಗಳಲ್ಲಿ 113 ರನ್ ಗಳಿಸಿದ್ದರು. ಇದರಲ್ಲಿ 12 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡಿತ್ತು. 28 ಎಸೆತಗಳಲ್ಲಿ ಶತಕ ಸಿಡಿಸಿ ಅತ್ಯಂತ ವೇಗವಾಗಿ ಟಿ-20ಯಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದರು.
ಉರ್ವಿಲ್ ಸಿಡಿಲಬ್ಬರದ ಶತಕದ ನೆರವಿನಿಂದ ಗುಜರಾತ್ ತಂಡ 13.1 ಓವರ್ ಗಳಲ್ಲಿ ಗುರಿ ಮುಟ್ಟಿ ಉತ್ತರಾಖಂಡ್ ವಿರುದ್ಧ 8 ವಿಕೆಟ್ ಗಳ ಜಯಭೇರಿ ಬಾರಿಸಿತು.
ಉತ್ತರಾಖಂಡ್ ಒಡ್ಡಿದ 153 ರನ್ ಗಳ ಕಠಿಣ ಗುರಿ ಬೆಂಬತ್ತಿದ ಗುಜರಾತ್ ತಂಡ ಉರ್ವಿಲ್ ಪಟೇಲ್ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸರ್ ಗಳ ಸಹಾಯದಿಂದ 115 ರನ್ ಸಹಾಯದಿಂದ ಸುಲಭ ಗೆಲುವು ದಾಖಲಿಸಿತು.
2023ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ೨೦ ಲಕ್ಷ ರೂ.ಗೆ ಆಡಿದ್ದ 24 ವರ್ಷದ ಉರ್ವಿಲ್ ಪಟೇಲ್ ಅವರನ್ನು 2024ರಲ್ಲಿ ಬಿಡುಗಡೆ ಮಾಡಿತ್ತು. 2025ರ ಹರಾಜಿನಲ್ಲಿ 30 ಲಕ್ಷ ರೂ. ಮೂಲಧನ ಹೊಂದಿದ್ದ ಉರ್ವಿಲ್ ಯಾವುದೇ ತಂಡವನ್ನು ಆಕರ್ಷಿಸಲು ವಿಫಲರಾಗಿ ಅನ್ ಸೋಲ್ಡ್ ಆಗಿದ್ದರು. ಇದರ ಬೆನ್ನಲ್ಲೇ 2 ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಬರೆದು ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.