ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಕಲಬುರಗಿಗೆ ಏನಾದರೂ ಮಾಡಿದ್ದೇನೆ ಎಂದಾದರೆ ನನ್ನ ಅಂತ್ಯ ಸಂಸ್ಕಾರಕ್ಕೆ ಬನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕ ಭಾಷಣ ಮಾಡಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಅಳಿಯ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ಭಾಷಣ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿಗೆ ನಾನು ಏನಾದರೂ ಮಾಡಿದ್ದೇನೆ ಎಂದಾದರೆ ಕಾಂಗ್ರೆಸ್ ಗೆ ಮತ ಹಾಕಿ. ಇಲ್ಲದಿದ್ದರೆ ನಾನು ಏನೂ ಮಾಡಿಲ್ಲ. ಕಲಬುರಗಿಯ ಬಾಂಧವ್ಯ ಮುಗಿಯಿತು ಎಂದು ಭಾವಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದರೆ ಕಲಬುರಗಿ ಜನ ನನ್ನ ಮರೆತಿದ್ದಾರೆ ಎಂದು ಭಾವಿಸುತ್ತೇನೆ. ಒಂದು ವೇಳೆ ಮತ ಹಾಕದೇ ಇದ್ದರೂ ಪರ್ವಾಗಿಲ್ಲ. ಕಲಬುರಿಗಿಗೆ ನನ್ನ ಸೇವೆಯನ್ನು ಗುರುತಿಸಿದರೆ ನನ್ನ ಅಂತ್ಯ ಸಂಸ್ಕಾರಕ್ಕಾದರೂ ಬನ್ನಿ ಎಂದು ಖರ್ಗೆ ಕರೆ ನೀಡಿದರು.
ನನ್ನ ಕೊನೆ ಉಸಿರು ಇರುವವರೆಗೂ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇನೆ. ನಾನು ಕೊನೆಯವರೆಗೂ ಹೋರಾಟ ನಡೆಸುತ್ತೇನೆ. ಹೊರತು ಬಿಜೆಪಿ-ಆರ್ ಎಸ್ ಎಸ್ ಸಿದ್ಧಾಂತಕ್ಕೆ ಮಣಿಯುವುದಿಲ್ಲ ಎಂದರು.
ನಾನು ರಾಜಕಾರಣಕ್ಕಾಗಿಯೇ ಹುಟ್ಟಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಿರಬಹುದು. ಆದರೆ ಸಿದ್ದಾಂತದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ನಾನು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಎಂದು ಖರ್ಗೆ ಸ್ಪಷ್ಟವಾಗಿ ತಿಳಿಸಿದರು.