ಭಾರತ ತಂಡದಿಂದ ಕಡೆಗಣಿಸಲ್ಪಟ್ಟ ಅಜಿಂಕ್ಯ ರಹಾನೆ ಮತ್ತು ಪೃಥ್ವಿ ಶಾ ಅವರ ಅಮೋಘ ಆಟದಿಂದ ಮುಂಬೈ ತಂಡ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆಂಬತ್ತಿದ ವಿಶ್ವದಾಖಲೆ ಬರೆದಿದೆ.
ಗುರುವಾರ ನಡೆದ ಸೈಯ್ಯದ್ ಮುಷ್ತಕ್ ಅಲಿ ಟಿ-20 ಪಂದ್ಯದಲ್ಲಿ ವಿದರ್ಭ ಗಳಿಸಿದ 6 ವಿಕೆಟ್ ಗೆ 221 ರನ್ ಗುರಿಯನ್ನು ಬೆಂಬತ್ತಿ ಶ್ರೇಯಸ್ ಅಯ್ಯರ್ ಸಾರಥ್ಯದ ಮುಂಬೈ ತಂಡ ವಿಶ್ವದಾಖಲೆ ಬರೆದಿದೆ. ಅಲ್ಲದೇ 200ಕ್ಕಿಂತ ಅಧಿಕ ಮೊತ್ತವನ್ನು ಯಶಸ್ವಿಯಾಗಿ ಬೆಂಬತ್ತಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದಕ್ಕೂ ಮುನ್ನ ಪಾಕಿಸ್ತಾನದ ಕರಾಚಿ ಡಾಲ್ಫಿನ್ಸ್ ತಂಡ 2010ರ ಟಿ-20 ಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ರಾವಲ್ಪಿಂಡಿ ರಾಮ್ಸ್ ತಂಡ ಒಡ್ಡಿದ 210 ರನ್ ಗುರಿಯನ್ನು ಬೆಂಬತ್ತಿ ವಿಶ್ವದಾಖಲೆ ಬರೆದಿತ್ತು.
ಅಜಿಂಕ್ಯ ರಹಾನೆ 45 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 84 ರನ್ ಸಿಡಿಸಿದರೆ, ಐಪಿಎಲ್ ಫ್ರಾಂಚೈಸಿಗಳಿಂದ ಕಡೆಗಣಿಸಲ್ಪಟ್ಟು ವ್ಯಾಪಕ ಟೀಕೆಗೆ ಗುರಿಯಾಗಿರುವ ಪೃಥ್ವಿ ಶಾ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 49 ರನ್ ಸಿಡಿಸಿದರು. ಇವರಿಬ್ಬರು 7 ಓವರ್ ಗಳಲ್ಲಿ 83 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು.
ಶ್ರೇಯಸ್ ಅಯ್ಯರ್ (5) ಮತ್ತು ಸೂರ್ಯಕುಮಾರ್ ಯಾದವ್ (9) ವಿಫಲರಾದರು. ಆಗ 8 ಓವರ್ ಗಳಲ್ಲಿ 104 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ಶಿವಂ ದುಬೆ (ಅಜೇಯ 37 ರನ್, 22 ಎಸೆತ, 1 ಬೌಂಡರಿ, 2 ಸಿಕ್ಸರ್) ಮತ್ತು ಸುಯೆಶ್ ಶಿಂಘೆ (36 ರನ್, 12 ಎಸೆತ, 1 ಬೌಂಡರಿ, 4 ಸಿಕ್ಸರ್) ತಂಡವನ್ನು 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.