ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಮುಂದಿನ ವಾರ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶನಿವಾರದಿಂದ ಕೆಲವು ದಿನಗಳ ಕಾಲ ಬಿಸಿಲು ಕಾಣಿಸಿಕೊಳ್ಳಲಿದೆ. ಆದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ವಾಯುಭಾರ ಕುಸಿತದಿಂದ ಡಿಸೆಂಬರ್ 16ರಂದು ತಮಿಳುನಾಡು ಕಡಲತೀರವನ್ನು ಪ್ರವೇಶಿಸಲಿರುವ ಹಿಂಗಾರು ಮಳೆಯ ಆರ್ಭಟ, ಅಂಡಮಾನ್ ಮತ್ತು ನಿಕೋಬಾರ್ ದ್ವಿಪಗಳ ಬಳಿ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ.
ಈ ಬಾರಿಯ ಭಾರೀ ಮಳೆ ತಮಿಳುನಾಡಿನ 11 ಜಿಲ್ಲೆಗಳ ಮೇಲೆ ಪರಿಣಾಮ ಬೀರಲಿದ್ದು, ತೆಂಕಾಸಿ, ತೂತುಕೂಡಿ, ತಿರುವಣ್ಣವೈಲಿ ಹಾಗೂ ರಾಜಧಾನಿ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈಗಾಗಲೇ ಚಂಡಮಾರುತದ ಪರಿಣಾಮ ಸುರಿದ ಭಾರೀ ಮಳೆಯಿಂದ ತಮಿಳುನಾಡಿನಲ್ಲಿ ೫ ಮಂದಿ ಮೃತಪಟ್ಟಿದ್ದು, 100 ಹಸುಗಳು ಅಸುನೀಗಿವೆ. 20 ಜಿಲ್ಲೆಗಳಲ್ಲಿ ೪೦೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. 50 ಶಿಬಿರಗಳಲ್ಲಿ 2000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು.