ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35 ರನ್ ಗಳ ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಹೈದರಾಬಾದ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಗೆ 206 ರನ್ ಸಂಪಾದಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 171 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್ ಸಿಬಿಗೆ ಇದು ಸತತ 5 ಸೋಲುಗಳ ನಂತರ ಬಂದ ಎರಡನೇ ಜಯವಾಗಿದೆ. ಈ ಮೂಲಕ ಆರ್ ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಭವಿಸಿದ ವೀರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು.
ಆರ್ ಸಿಬಿ ತಂಡದ ಸಂಘಟಿತ ದಾಳಿಗೆ ತತ್ತರಿಸಿದ ಹೈದರಾಬಾದ್ ತಂಡ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.
ಹೈದರಾಬಾದ್ ಪರ ಶಹಬಾಜ್ ಅಹ್ಮದ್ (40), ಅಭಿಷೇಕ್ ಶರ್ಮ (31), ನಾಯಕ ಪ್ಯಾಟ್ ಕಮಿನ್ಸ್ (31) ಮಾತ್ರ ಹೋರಾಟ ನಡೆಸಿದರು. ಆರ್ ಸಿಬಿ ಪರ ಸ್ವಪ್ನಿಲ್ ಸಿಂಗ್ ಮತ್ತು ಕರ್ಣ್ ಶರ್ಮ ಮತ್ತು ಕೆಮರೂನ್ ಗ್ರೀನ್ ತಲಾ 2 ವಿಕೆಟ್ ಪಡೆದರು.
ಕೊಹ್ಲಿ, ರಜತ್ ಫಿಫ್ಟಿ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದಾರ್ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಿತು.
ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ ಔಟಾದರೆ, ರಜತ್ ಪಟಿದರ್ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 50 ರನ್ ಚಚ್ಚಿದರು. ನಾಯಕ ಫಾಫ್ ಡು ಪ್ಲೆಸಿಸ್ (25), ಕೆಮರೂನ್ ಗ್ರೀನ್ (37) ತಂಡವನ್ನು200ರ ಗಡಿ ದಾಟಿಸಿದರು.