ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಪಾಸ್ ಕರೊ (ಜೈ ಶ್ರೀರಾಮ್ ಪಾಸ್ ಮಾಡಿ) ಎಂದು ಬರೆದಿದ್ದ ವಿದ್ಯಾರ್ಥಿಯನ್ನು ಪಾಸ್ ಮಾಡಿದ ಪ್ರೊಫೆಸರ್ ಅನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ್ ಮತ್ತು ಕ್ರಿಕೆಟಿಗರ ಹೆಸರು ಬರೆದಿದ್ದರೂ ಪಾಸ್ ಮಾಡಲಾಗಿತ್ತು. ತಪಾಸಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಪ್ರೊಫೆಸರ್ ಗಳನ್ನು ಅಮಾನತು ಮಾಡಲಾಗಿದೆ.
ಜನ್ ಪುರ್ ನಲ್ಲಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ವೀರ್ ಬಹದ್ದೂರ್ ಸಿಂಗ್ ಅಮಾನತುಗೊಂಡ ಪ್ರೊಫೆಸರ್. ಈತ ವಿದ್ಯಾರ್ಥಿಗಳು ಪ್ರಶ್ನೆಗೆ ಸರಿಯಾಗಿ ಉತ್ತರ ಬರೆಯುವ ಬದಲು ಜೈ ಶ್ರೀರಾಮ್, ಕ್ರಿಕೆಟಿಗರ ಹೆಸರು, ಹಾಡು, ಸಂಗೀತ ಸೇರಿದಂತೆ ಬಾಯಿಗೆ ಬಂದದ್ದು ಬರೆದಿದ್ದರೂ ಅವರ ಬಳಿ ಹಣ ಪಡೆದು ಪಾಸ್ ಮಾಡಿಸುತ್ತಿದ್ದ.
ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ದಿವ್ಯಾಂಶು ಸಿಂಗ್, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರು ಸೇರಿದಂತೆ ವಿವಿಧ ಉನ್ನತ ಮಟ್ಟದ ನಾಯಕರಿಗೆ ಪತ್ರೆ ಬರೆದು ಪರೀಕ್ಷೆಯಲ್ಲಿ ಶೂನ್ಯ ಅಂಕ ತೆಗೆದವರು ಕೂಡ ಶೇ.60ಕ್ಕೂ ಅಧಿಕ ಅಂಕಗಳಿಂದ ಪಾಸಾಗುತ್ತಿದ್ದಾರೆ. ಇದರ ಹಿಂದೆ ವಿಶ್ವವಿದ್ಯಾಲಯದ ಅಧಿಕಾರಿಗಳ ಕೈವಾಡ ಕಾರಣ ಎಂದು ಆರೋಪಿಸಿದ್ದರು.
ಆರ್ ಟಿಐ ನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತರ ಪತ್ರಿಕೆಗಳ ತನಿಖೆ ವೇಳೆ ಪ್ರೊಫೆಸರ್ ಗಳು ದಡ್ಡ ವಿದ್ಯಾರ್ಥಿಗಳಿಗೂ ಶೆ.60ಕ್ಕಿಂತ ಅಧಿಕ ಅಂಕ ನೀಡಿ ಪಾಸ್ ಮಾಡಿದ್ದು ತಿಳಿದು ಬಂದಿದ್ದು ಅಮಾನತು ಮಾಡಲಾಗಿದೆ.
ಒಬ್ಬ ವಿದ್ಯಾರ್ಥಿ ಪ್ರಶ್ನೆಗೆ ಸಂಬಂಧಿಸಿದ ಉತ್ತರ ಬರೆಯುವ ಬದಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರ ಹೆಸರು ಬರೆದಿದ್ದಾನೆ. ಕೆಲವು ವಿದ್ಯಾರ್ಥಿಗಳು ಜೈ ಶ್ರೀರಾಮ್ ಅಂತ ಬರೆದಿದ್ದಾರೆ. ಈ ರೀತಿಯ ಉತ್ತರಗಳಿಗೆ ಹೇಗೆ ಅಂಕ ನೀಡಲಾಗಿದೆ ಎಂದು ಪ್ರಶ್ನಿಸಲಾಗಿದೆ.