ಅನಾರೋಗ್ಯಕ್ಕೆ ಒಳಗಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಮಹಾರಾಷ್ಟ್ರದ ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತ ತಂಡದ ಪ್ರತಿಭಾನ್ವಿತ ಬ್ಯಾಟ್ಸ್ ಮನ್ ಆಗಿದ್ದ ವಿನೋದ್ ಕಾಂಬ್ಳಿ ಕಳೆದ ೧೦ ವರ್ಷಗಳಿಂದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿನೋದ್ ಕಾಂಬ್ಳಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಥಾಣೆ ಆಸ್ಪತ್ರೆಗೆ ಡಿಸೆಂಬರ್ ೨೧ರಂದು ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
೧೯೯೬ರ ವಿಶ್ವಕಪ್ ತಂಡದ ಆಟಗಾರನಾಗಿದ್ದ ವಿನೋದ್ ಕಾಂಬ್ಳಿ ಆರ್ಥಿಕ ಮುಗ್ಗಟ್ಟು ಹಾಗೂ ಮದ್ಯ ವ್ಯಸನದಿಂದ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವಾರು ಕ್ರಿಕೆಟಿಗರು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಬಾಲ್ಯದ ಕೋಚ್ ರಮಾಕಾಂತ್ ಆರ್ಚೆಕರ್ ಅವರ ಕಾರ್ಯಕ್ರಮದಲ್ಲಿ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಅಲ್ಲದೇ ಹಾಡು ಹಾಡಿ ಗಮನ ಸೆಳೆದಿದ್ದರು.
೨೦೧೩ರಲ್ಲಿ ಎರಡು ಬಾರಿ ಹೃದಯಘಾತಕ್ಕೆ ಒಳಗಾಗಿದ್ದೆ ಎಂದು ವಿನೋದ್ ಕಾಂಬ್ಳಿ ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಮೂತ್ರದ ಸೋಂಕಿನಿಂದ ನರಳುತ್ತಿದ್ದರು. ಸಚಿನ್ ತೆಂಡೂಲ್ಕರ್ ವೈದ್ಯಕೀಯ ನೆರವು ನೀಡಿ ನೆರವಾಗಿದ್ದನ್ನು ಕಾಂಬ್ಳಿ ಹೇಳಿಕೊಂಡಿದ್ದರು.