ಆರಂಭಿಕ ಜಾಕ್ ಫ್ರೇಸರ್ ಮ್ಯಾಕ್ ಗುರ್ಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಮತ್ತಷ್ಟು ಹತ್ತಿರವಾಗಿದೆ.
ದೆಹಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 257 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಕಳೆದುಕೊಂಡು 247 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಪರ ತಿಲಕ್ ವರ್ಮಾ 32 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ಸೇರಿದ 63 ರನ್ ಸಿಡಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 46 ರನ್ ಬಾರಿಸಿದರು. ಟಿಮ್ ಹೆಡ್ 17 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಜಾಕ್ ಫ್ರೇಸರ್ ಗುರ್ಕ್ 27 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 86 ರನ್ ಚಚ್ಚಿದರು. ಅಲ್ಲದೇ ಮೊದಲ ವಿಕೆಟ್ ಗೆ ಅಭಿಷೇಕ್ ಪೊರೆಲ್ (36) ಜೊತೆ 7.3 ಓವರ್ ಗಳಲ್ಲಿ 114 ರನ್ ಜೊತೆಯಾಟದಿಂದ ತಂಡಕ್ಕೆ ಮಿಂಚಿನ ಆರಂಭ ನೀಡಿದರು.
ನಂತರ ಶಾಯಿ ಹೋಪ್ (41), ನಾಯಕ ರಿಷಭ್ ಪಂತ್ (29) ಮತ್ತು ಟ್ರಿಸ್ಟನ್ ಸ್ಟಬ್ಸ್ 25 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 48 ರನ್ ಚಚ್ಚಿ ತಂಡದ ಮೊತ್ತ 250ರ ಗಡಿ ದಾಟಿಸಿದರು.