Thursday, December 25, 2025
Google search engine
Homeಬೆಂಗಳೂರುಬೀದಿ ಬದಿ ವ್ಯಾಪಾರದ ರಸ್ತೆಗಳನ್ನು ಗುರುತಿಸಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್ ಸೂಚನೆ

ಬೀದಿ ಬದಿ ವ್ಯಾಪಾರದ ರಸ್ತೆಗಳನ್ನು ಗುರುತಿಸಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿ ನಾಥ್ ಸೂಚನೆ

ಬೆಂಗಳೂರು: ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ ಬೀದಿ ಬದಿ ವ್ಯಾಪಾರಿಗಳು, ವ್ಯಾಪಾರ ವಲಯವನ್ನು ಗುರುತಿಸುವವರೆಗೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಮನವಿ ಮಾಡಿದರು.

ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಶ್ಚಿಮ ವಲಯದಲ್ಲಿ ಈಗಾಗಲೇ ಸುಮಾರು 7000 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಪಾಲಿಕೆ ವತಿಯಿಂದ ವೆಂಡಿಂಗ್ ಜೋನ್‌ಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಸಂಬಂಧ ವೆಂಡಿಂಗ್ ಜೋನ್ ಗುರುತಿಸುವವರೆಗೆ ಯಾವ್ಯಾವ ರಸ್ತೆಗಳಲ್ಲಿ ವ್ಯಾಪಾರ ಮಾಡಬಹುದು ಎಂಬುದನ್ನು ಪರಿಶೀಲಿಸಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾರ್ಕ್ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ:

ಯಾವ್ಯಾವ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ತರು ವ್ಯಾಪಾರ ಮಾಡಬಹುದು ಎಂಬುದನ್ನು ಗುರುತಿಸಬೇಕು. ಅನಂತರ ಪಾದಚಾರಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪಾದಚಾರಿ ಮಾರ್ಗದಲ್ಲಿ ಮಾರ್ಕಿಂಗ್ ಮಾಡಿ(ಗಡಿ ಗುರುತಿಸಿ) ಅವರಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಲು ಸೂಚನೆ ನೀಡಿದರು.

ಶಾಶ್ವತ ಪೆಟ್ಟಿಗೆಗಳನ್ನು ತೆರವುಗೊಳಿಸಿ:

ಪಾದಚಾರಿ ಮಾರ್ಗದಲ್ಲಿ ಶಾಶ್ವತ ಪೆಟ್ಟಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರೆ ಅದನ್ನು ಕೂಡಲೆ ತೆರವುಗೊಳಿಸಬೇಕು. ಪಾದಚಾರಿಗಳ ಓಡಾಟಕ್ಕೆ ಅವಕಾಶವಿರಬೇಕು. ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವಂತಿಲ್ಲ. ಇದರ ಜೊತೆಗೆ ಪಾದಚಾರಿ ಮಾರ್ಗದಲ್ಲಿ ಬರುವ ಅಂಗಡಿ/ಮುಂಗಟ್ಟುಗಳ ಮುಂಭಾಗದ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಪರಿಶೀಲಿಸಿ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ಚಿತಾಗಾರಕ್ಕೆ ಪ್ರಸ್ತಾವನೆ ಸಲ್ಲಿಸಿ:

ಚಾಮರಾಜಪೇಟೆಯ ಟಿ.ಆರ್.ಮಿಲ್ ಬಳಿಯ ರುದ್ರಭೂಮಿಯು ಸುಮಾರು 3 ಎಕರೆ ಪ್ರದೇಶದಲ್ಲಿದ್ದು, ವಿದ್ಯತ್ ಚಿತಾಗಾರ ನಿರ್ಮಾಣ ಮಾಡಿದರೆ ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ವಿದ್ಯತ್ ಚಿತಾಗಾರ ಮಾಡುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

90ಕ್ಕೂ ಹೆಚ್ಚು ಅಹವಾಲುಗಳ ಸ್ವೀಕಾರ:

ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಇಂದು ನಾಗರಿಕರಿಂದ ಒಟ್ಟಾರೆ 90ಕ್ಕೂ ಹೆಚ್ಚು  ಅಹವಾಲನ್ನು ಸ್ವೀಕರಿಸಿ, ಎಲ್ಲಾ ದೂರುಗಳನ್ನು ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ವಲಯ ಆಯುಕ್ತರಾದ ಅರ್ಚನಾ, ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಉಪ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರರಾದ ಶಶಿ ಕುಮಾರ್, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments