ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ 150 ಗೆಲುವು ಕಂಡ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಚೆಪಾಕ್ ಮೈದಾನದಲ್ಲಿ ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 78 ರನ್ ಗಳ ಭಾರೀ ಅಂತರದಿಂದ ಗೆಲುವು ಕಂಡಿತು. ಇದರಿಂದ ಧೋನಿ 150 ಪಂದ್ಯಗಳನ್ನು ಗೆದ್ದ ತಂಡದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಧೋನಿ ಐಪಿಎಲ್ ನಲ್ಲಿ 259 ಪಂದ್ಯಗಳನ್ನು ಆಡಿದ್ದು, 42 ವರ್ಷದ ಧೋನಿ 5 ಬಾರಿ ಪ್ರಶಸ್ತಿ ಗೆದ್ದ ತಂಡದ ನಾಯಕ ಎಂಬ ಗೌರವಕ್ಕೆ ಈಗಾಗಲೇ ಪಾತ್ರರಾಗಿದ್ದಾರೆ. ಅಲ್ಲದೇ ನಾಯಕನಾಗಿ ಅತೀ ಹೆಚ್ಚು ಪಂದ್ಯವನ್ನು ಗೆಲ್ಲಿಸಿದ (133) ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮ 87 ಪಂದ್ಯಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ.
ಧೋನಿ 150 ಪಂದ್ಯಗಳಲ್ಲಿ ಗೆಲುವು ಕಂಡಿದ್ದು ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ 133 ಪಂದ್ಯಗಳನ್ನು ಗೆದ್ದ ತಂಡದ ಆಟಗಾರರಾಗಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ 125, ಸುರೇಶ್ ರೈನಾ 122 ಪಂದ್ಯಗಳ ಗೆಲುವಿನೊಂದಿಗೆ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.