ಮುಂಬೈ: ಮುಂಬರುವ ಮಹಾರಾಷ್ಟ್ರ ಪಂಚಾಯಿತಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಆಡಳಿತ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟಗಳು ನೀರ್ಧರಿಸಿವೆ.
ಎಂವಿಯ ಕೂಟದ ಮಿತ್ರಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ ಮತ್ತು ಶೀವಸೇನೆ ಪ್ರತ್ಯೇಕ ಸ್ಪರ್ಧೆಯ ಸುಳಿವು ನೀಡಿವೆ. ಆಡಳಿತ ಮಹಾಯುತಿಯಲ್ಲಿಯೂ ಇದೇ ಲಕ್ಷಣಗಳು ಕಾಣುತ್ತಿವೆ.
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಸದ್ಯದಲ್ಲೇ ನಡೆಯಲಿದ್ದು, ಈ ಚುನಾವಣೆಗಳಲ್ಲಿ ಶಿವಸೇನೆ ಯುಬಿಟಿ ಬಣ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸಂಜಯ್ ರಾವತ್ ಘೋಷಿಸಿದ್ದಾರೆ.
ಇಂಡಿಯಾ ಕೂಟ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಗಳು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗಾಗಿ ಮಾಡಿಕೊಂಡಿದ್ದ ಮೈತ್ರಿ ಎಂದು ರಾವತ್, ಹೇಳಿದರು.
“ಮೈತ್ರಿಕೂಟದಲ್ಲಿ, ಪ್ರತ್ಯೇಕ ಪಕ್ಷಗಳ ಕಾರ್ಯಕರ್ತರಿಗೆ ಅವಕಾಶಗಳು ಸಿಗುವುದಿಲ್ಲ, ಮತ್ತು ಇದು ಸಾಂಸ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಾವು ಮುಂಬೈ, ಥಾಣೆ, ನಾಗ್ಪುರ ಮತ್ತು ಇತರ ಪುರಸಭೆಗಳು, ಜಿಲ್ಲಾ ಪರಿಷತ್ಗಳು ಮತ್ತು ಪಂಚಾಯತಿಗಳಿಗೆ ನಮ್ಮ ಸ್ವಂತ ಬಲದ ಮೇಲೆ ಸ್ಪರ್ಧಿಸುತ್ತೇವೆ” ಎಂದು ಅವರು ಹೇಳಿದರು.
ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಸೂಚನೆಗಳನ್ನು ನೀಡಿದ್ದಾರೆ ಎಂದು ರಾವತ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಎಂವಿಎ ಸೋಲಿಗೆ ಕಾರಣರಾದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರನ್ನು ಟೀಕಿಸಿದ ರಾವತ್, ಒಮ್ಮತದಲ್ಲಿ ನಂಬಿಕೆ ಇಡದವರಿಗೆ ಮೈತ್ರಿಕೂಟದಲ್ಲಿರಲು ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಇಂಡಿಯಾ ಬ್ಲಾಕ್ ಒಂದೇ ಒಂದು ಸಭೆ ನಡೆಸಲಿಲ್ಲ ಎಂದು ಅವರು ಹೇಳಿದ್ದಾರೆ.
“ನಾವು ಇಂಡಿಯಾ ಕೂಟಕ್ಕೆ ಒಬ್ಬ ಸಂಚಾಲಕನನ್ನು ನೇಮಿಸಲು ಸಾಧ್ಯವಾಗಲಿಲ್ಲ. ಅದು ಒಳ್ಳೆಯದಲ್ಲ. ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ, ಸಭೆ ಕರೆಯುವುದು ಕಾಂಗ್ರೆಸಿನ ಜವಾಬ್ದಾರಿಯಾಗಿದೆ” ಎಂದು ಸೇನಾ-ಯುಬಿಟಿ ನಾಯಕ ಹೇಳಿದರು.