ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಸಿದ್ಧರಿರುವಂತೆ ರಾಹುಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿರುವುದಾಗಿವರದಿಗಳು ತಿಳಿಸಿವೆ.
ಕೆಎಲ್ ರಾಹುಲ್ ಇಂಗ್ಲೆಂಡ್ ಏಕದಿನ ಸರಣಿಯಿಂದ ವಿರಾಮ ಕೋರಿದ್ದು, ಇದಕ್ಕೆ ಆಯ್ಕೆ ಸಮಿತಿ ಈ ಮೊದಲು ಒಪ್ಪಿಗೆ ಸೂಚಿಸಿತ್ತು. ಆದರೀಗ ತಂಡದ ಭಾಗವಾಗುವಂತೆ ಅವರಿಗೆ ಹೇಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು, ಕೆಎಲ್ ರಾಹುಲ್ ಅವರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಲಭ್ಯವಿರುವಂತೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏಕದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಮತ್ತು ವಿಕೆಟ್ ಕೀಪರ್ ಪಾತ್ರ ನಿರ್ವಹಿಸುವ ಕೆಎಲ್ ರಾಹುಲ್‌ಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲು ಆಯ್ಕೆದಾರರು ಈ ಮೊದಲು ನಿರ್ಧರಿಸಿದ್ದರು.
ಆದರೆ, ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು, ಇದೀಗ ಮತೆ ತಂಡದ ಭಾಗವಾಗುವಂತೆ ಕೆಎಲ್ ರಾಹುಲ್ ಅವರಿಗೆ ಆಯ್ಕೆ ಸಮಿತಿ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಸದ್ಯ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ರಿಷಬ್ ಪಂತ್, ಸಂಜು ಸ್ಮಾಮ್ಸನ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿ ಇದೆ. ಮೂವರೂ ವಿಕೆಟ್ ಕೀಪರ್‌ಗಳಾಗಿದ್ದು, ಅಂತಿಮವಾಗಿ ಆಯ್ಕೆ ಸಮಿತಿ ಯಾರತ್ತ ಒಲವು ತೋರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಲಭ್ಯವಿರುವಂತೆ ಬಿಸಿಸಿಐ ಕೆಎಲ್ ರಾಹುಲ್ ಅವರಿಗೆ ಸೂಚನೆ ನೀಡಿದ್ದು, ಅವರನ್ನೇ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆ ಮಾಡಲಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಹೆಚ್ಚಿನ ಕಾಲಾವಕಾಶಕ್ಕೆ ಮನವಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳನ್ನು ಪ್ರಕಟಿಸಲು ಐಸಿಸಿ ಜನವರಿ 12ರವರೆಗೆ ಗಡುವು ನಿಗದಿಪಡಿಸಿದೆ.
ಆದ್ದರಿಂದ ಟೂರ್ನಿಯಲ್ಲಿ ಆಡಲಿರುವ 8 ತಂಡಗಳು ಇನ್ನೇರಡು ದಿನಗಳಲ್ಲಿ ಪ್ರಕಟವಾಗಬೇಕಿದೆ. ಆದರೆ ಬಿಸಿಸಿಐ ಮಾತ್ರ ತನ್ನ ತಂಡವನ್ನು ಪ್ರಕಟಿಸಲು ಕೊಂಚ ಸಮಯಾವಕಾಶ ಕೇಳಬಹುದು ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಐಸಿಸಿಯ ಸೂಚನೆಗಳನ್ನು ಅನುಸರಿಸಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಯಕ್ಕೆ ತಂಡವನ್ನು ಪ್ರಕಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಲು ಐಸಿಸಿ ಬಳಿ ಸಮಯಾವಕಾಶ ಕೇಳಬಹುದು. ಆದರೆ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಎರಡು ಮೂರು ದಿನಗಳಲ್ಲಿ ಪ್ರಕಟಿಸಬಹುದು.