ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಮೇಜರ್ ಸರ್ಜರಿಗೆ ಬಿಸಿಸಿಐ ಮುಂದಾಗಿದೆ.
ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ರೆಕ್ಕೆ-ಪುಕ್ಕಕ್ಕೆ ಕತ್ತರಿ ಹಾಕಿರುವ ಬಿಸಿಸಿಐ ಇದೇ ವೇಳೆ ಆಟಕ್ಕೆ ತಕ್ಕ ಕಜ್ಜಾಯ ನೀಡುವುದಾಗಿ ಆಟಗಾರರಿಗೆ ತಿಳಿಸಿದೆ. ಅಲ್ಲದೇ ಕುಟುಂಬದ ಜೊತೆ ಪಯಣಿಸುವುದನ್ನೂ ನಿರ್ಭಂಧಿಸಲು ಮುಂದಾಗಿದೆ.
ಟೀಮ್ ಇಂಡಿಯಾ ಆಟಗಾರರಿಗೆ ಅವರ ಪ್ರದರ್ಶನಕ್ಕೆ ಅನುಗುಣವಾಗಿ ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಅಧಿಕಾರಿಗಳು ಚರ್ಚಿಸಿದ್ದಾರೆ. ಅಂದರೆ ಚೆನ್ನಾಗಿ ಆಡಿದರೆ ಮಾತ್ರ ಉತ್ತಮ ಸಂಭಾವನೆ ಪಡೆಯಲಿದ್ದಾರೆ. ಇಲ್ಲದಿದ್ದರೆ ವೇತನ ಕಡಿತವಾಗಲಿದೆ. ಅಂದರೆ ಪ್ರತಿ ಸರಣಿಯಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಸಂಭಾವನೆ ನೀಡಲು ಬಿಸಿಸಿಐ ನಿರ್ಧರಿಸಿದೆ.
ಇದು ಹಿಂದಿನಿಂದಲೇ ಕರಾರಿನಲ್ಲಿ ಇರುವ ಅಂಶವೇ ಆದರೂ ಅದನ್ನು ಈವರೆಗೆ ಬಿಸಿಸಿಐ ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ತಂಡ ಮೇಲಿಂದ ಮೇಲೆ ಸೋಲು ಅನುಭವಿಸುತ್ತಿದ್ದು, ಅದರ ವಿಶ್ವಾಸಾರ್ಹತೆಗೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲಿ ಕಾಸಿಗೆ ತಕ್ಕ ಕಜ್ಜಾಯ ಎಂಬ ನಿಯಮವನ್ನು ಜಾರಿಗೆ ತರಲು ಬಿಸಿಸಿಐ ನಿರ್ಧರಿಸಿದೆ.
ಸಂಗಾತಿಗಳಿಗೆ ನೋ ಎಂಟ್ರಿ
ಈ ಪೈಕಿ ಮೊದಲ ಕ್ರಮವಾಗಿ ಆಟಗಾರರ ಸಂಗಾತಿಗಳಿಗೆ ನೋ ಎಂಟ್ರಿ ಹೇರಲಾಗಿದ್ದು, ಪ್ರಮುಖವಾಗಿ ಟೀಂ ಇಂಡಿಯಾದ ದೀರ್ಘ ಪ್ರವಾಸಗಳ ವೇಳೆ ಆಟಗಾರರು ತಮ್ಮ ಸಂಗಾತಿಗಳನ್ನು ಕರೆತರದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಈ ನಿಯಮ ಮೊದಲೇ ಇತ್ತಾದರೂ 2019ರಲ್ಲಿ ರವಿಶಾಸ್ತ್ರಿ ಕೋಚ್ ಆದ ಬಳಿಕ ಈ ನಿಯಮವನ್ನು ಸಡಿಲಿಸಲಾಗಿತ್ತು. ಆದರೆ ಇದೀಗ ಮತ್ತೆ ಈ ನಿಯಮವನ್ನು ಕಠಿಣವಾಗಿ ಜಾರಿತರಲಾಗುತ್ತಿದೆ. ಆಟಗಾರರ ಕುಟುಂಬಸ್ಥರು ಅಥವಾ ಅವರ ಸಂಗಾತಿಗಳೊಂದಿಗೆ ಇರುವ ಸಮಯವನ್ನು ಮಿತಿಗೊಳಿಸಲು ಬಿಸಿಸಿಐ ಯೋಜಿಸುತ್ತಿದೆ.
ಇತ್ತೀಚೆನ ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ಜೊತೆ ಪ್ರಯಾಣ ಬೆಳೆಸದೆ ಸಂಗಾತಿಗಳ ಜೊತೆ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅವರ ಮ್ಯಾನೇಜರ್ ಗೌರವ್ ಅರೋರಾ ವಿರುದ್ಧವೂ ಮಂಡಳಿಯು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.
ಅರೋರಾ ಅವರನ್ನು ತಂಡದ ಹೋಟೆಲ್‌ನಲ್ಲಿ ಉಳಿಯಲು ಅಥವಾ ಕ್ರೀಡಾಂಗಣಗಳಲ್ಲಿ ವಿಐಪಿ ಪೆಟ್ಟಿಗೆಯಲ್ಲಿ ಕುಳಿತುಕೊಳ್ಳಲು ಅನುಮತಿ ನಿರಾಕರಿಸಿದೆ. ತಂಡದ ಬಸ್ ನಲ್ಲಿ ಆಟಗಾರರ ಜೊತೆ ಹೋಗಲು ಸಹ ಗಂಭೀರ್ ಅವರ ಮ್ಯಾನೇಜರ್ ಅರೋರಗೆ ಅವಕಾಶವಿರುವುದಿಲ್ಲ ಎಂದು ಹೇಳಲಾಗಿದೆ.
ಕಳೆದ ವಾರಾಂತ್ಯ ತಂಡದ ಕೋಚ್, ನಾಯಕ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥರ ಜೊತೆ ನಡೆದ ಸಭೆಯಲ್ಲಿ ಬಿಸಿಸಿಐ ಈ ಕ್ರಮಗಳ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದು ಮೂಲಗಳು ಹೇಳಿವೆ.