ಕರ್ನಾಟಕದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರನ್ನು ಭಾರತದ ಟಿ-20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದ್ದರೆ, ಫಾರ್ಮ್ ಕೊರತೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ನೀಡಲಾಗಿದೆ.
ನಾಯಕ ರೋಹಿತ್ ಶರ್ಮ ಮತ್ತು ಅಧ್ಯಕ್ಷ ಅಜಿತ್ ಅರ್ಗಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಮುಂಬೈನಲ್ಲಿ ಭಾನುವಾರ ಸುದೀರ್ಘ ಚರ್ಚೆ ಬಳಿಕ ಅಂತಿಮ 15 ಸದಸ್ಯರ ತಂಡವನ್ನು ಪ್ರಕಟಿಸಿದರು.
ಕೆಎಲ್ ರಾಹುಲ್ ಭರ್ಜರಿ ಫಾರ್ಮ್ ನಡುವೆಯೂ ಅವರನ್ನು ಕೈಬಿಡಲಾಗಿದ್ದು, ಅಪಘಾತದ ನಂತರ ಚೇತರಿಸಿಕೊಂಡಿರುವ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.
ಫಾರ್ಮ್ ಕೊರತೆ ಹಾಗೂ ರೋಹಿತ್ ಶರ್ಮ ಜೊತೆಗಿನ ಮನಸ್ತಾಪದ ನಡುವೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಅನುಭವಿ ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಅವರನ್ನು ತಂಡದಲ್ಲಿ ಸ್ಥಾನ ನೀಡಲಾಗಿದೆ.
ಐಪಿಎಲ್ ನಲ್ಲಿ ಉತ್ತಮವಾಗಿ ರನ್ ಕಲೆ ಹಾಕಿದರೂ ರನ್ ಸರಾಸರಿ ಕಳಪೆಯಾಗಿದೆ ಎಂಬ ಕಾರಣಕ್ಕೆ ಟೀಕೆಟ್ ಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ತಜ್ಞರಾಗಿ ಕೊಹ್ಲಿ ಮತ್ತು ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಸಿರಾಜ್, ಜಸ್ ಪ್ರೀತ್ ಬುಮ್ರಾ ಅಲ್ಲದೇ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಚಾಹಲ್ ಜೊತೆ ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಕೂಡ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ 2024 ಜೂನ್ 5ರಂದು ಆರಂಭಗೊಳ್ಳಲಿದ್ದು, ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತ ಟಿ-20 ತಂಡ
ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯಜುರ್ವೆಂದ್ರ ಚಾಹಲ್, ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್, ಜಸ್ ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್.