ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಅತಿಕ್ರಮ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಜಾಗವನ್ನು ತೆರವುಗೊಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮರುವಶ ಮಾಡಿಕೊಂಡಿದೆ.
ಜನವರಿ 16 ರಿಂದ 18 ರವರೆಗೆ 3 ದಿನಗಳ ಕಾರ್ಯಾಚರಣೆಯಲ್ಲಿ ಪ್ರಾಧಿಕಾರವು 50 ಗ್ರಾನೈಟ್ ಕಾರ್ಖಾನೆ, ‘ಲೇಬರ್ ಶೆಡ್‌ಗಳು‘ ಸೇರಿದಂತೆ 200 ಶೆಡ್‌ಗಳು, ಬೇಕರಿಗಳು ಮತ್ತು ಮಾಚೋಹಳ್ಳಿ ಪ್ರದೇಶದ ಮುಖ್ಯ ಆರ್ಟಿರಿಯಲ್ ರಸ್ತೆಯಲ್ಲಿ (ಎಂಎಆರ್) 1 ಕಿಮೀ ವ್ಯಾಪ್ತಿಯ ವಿವಿಧ ಅಂಗಡಿಗಳನ್ನು ನೆಲಸಮಗೊಳಿಸಿದೆ.
ಅಕ್ರಮವಾಗಿ ಬಿಡಿಎ ಜಾಗವನ್ನು ಬಾಡಿಗೆ ಕೊಟ್ಟ ಮಾಲೀಕರು ಕಳೆದ 10 ವರ್ಷಗಳಿಂದ ಕೋಟ್ಯಂತರ ರೂಪಾಯಿ ಬಾಡಿಗೆ ಪಡೆದು ವಂಚಿಸಿದ್ದು, ಅಂಗಡಿ, ಬೇಕರಿ, ಗ್ರಾನೈಟ್ ಕಾರ್ಖಾನೆ ಹಾಗೂ ಶೆಡ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ ನೂರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
2015ರಲ್ಲಿ ಭೂಮಿ ಸ್ವಾಧೀನಕ್ಕೆ ಬಿಡಿಎ ಅಧಿಸೂಚನೆ ಹೊರಡಿಸಿತ್ತು. ನಂತರ ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆ ತಂದಿದ್ದರು. ಭೂಸ್ವಾಧೀನಕ್ಕೆ ಮುಂದಾಗುವಂತ ಬಿಡಿಎಗೆ ಹೈಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆ ಹಾಗೂ ಅಂಗಡಿ ಮಾಲೀಕರಿಗೆ 7 ದಿನಗಳ ಹಿಂದೆ ನೋಟಿಸ್ ನೀಡಿಲಾಗಿತ್ತು. ಇದನ್ನು ಒಪ್ಪದ ನಿವಾಸಿಗಳು ಹಾಗೂ ಮಾಲೀಕರು ಎಂದಿನಂತ ವ್ಯಾಪಾರ ಮುಂದುವರೆಸಿದ್ದರು.
ಪುಟ್ಟರಾಜು ಎಂಬಾತ 16 ಎಕರೆ ವಿಸ್ತೀರ್ಣದ ಬಿಡಿಎ ಜಾಗವನ್ನು ಬಾಡಿಗೆಗೆ ನೀಡಿ ಮಾಸಿಕ 1.5 ಕೋಟಿ ರೂ. ಬಾಡಿಗೆ ಪಡೆಯುತ್ತಿದ್ದ. ಈತನನ್ನು ನಂಬಿ ಹಲವರು ವ್ಯಾಪಾರ ನಡೆಸುತ್ತಿದ್ದರು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಖಾನೆ ನಡೆಸುತ್ತಿದ್ದವರು ಪುಟ್ಟರಾಜುಗೆ ಬಾಡಿಗೆ ನೀಡುತ್ತಿದ್ದು, ಸುಮಾರು 10 ವರ್ಷಗಳಿಂದ ಮಾಸಿಕ 1.5 ಕೋಟಿಗೂ ಹೆಚ್ಚು ಬಾಡಿಗೆ ಪಡೆಯುತ್ತಿದ್ದ. ಈತನನ್ನು ನಂಬಿ ಗ್ರಾನೈಟ್ ಕಾರ್ಖಾನೆ ಸ್ಥಾಪಿಸಿ, ವಸತಿ ಸೌಲಭ್ಯದೊಂದಿಗೆ 50 ಜನರನ್ನು ಇಟ್ಟುಕೊಂಡು ಕಾರ್ಖಾನೆ ನಡೆಸುತ್ತಿದ್ದರು.
ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನ್ಯಾಯಾಲಯ ಕೂಡ ನನ್ನ ಪರವಾಗಿದೆ ಎಂದ ಆತ ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ಸಂಪಾದಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ, ಬಿಡಿಎ ಹೊರಡಿಸಿದ ನೋಟಿಸ್ ಬಗ್ಗೆ ನನಗೆ ತಿಳಿದಿರಲಿಲ್ಲ. ಅದರ ಬಗ್ಗೆ ಯಾರೂ ನನಗೆ ಹೇಳಿರಲಿಲ್ಲ. ಭೂಮಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ವಿವಾದದಲ್ಲಿದೆ ಎಂದು ನಾನು ಪ್ರತಿಯೊಬ್ಬ ಮಾಲೀಕರಿಗೂ ತಿಳಿಸಿದ್ದೆ. ಆದರೂ ಅವರು ಕಾರ್ಖಾನೆ ಸ್ಥಾಪಿಸಿ, ಕೆಲಸ ನಡೆಸುತ್ತಿದ್ದರು ಎಂದು ಹೇಳಿಕೊಂಡಿದ್ದಾನೆ.