ಸಂಘಟಿತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ಗಳಿಂದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ ಗೆ 162 ರನ್ ಗಳಿಗೆ ನಿಯಂತ್ರಿಸಿದ ಪಂಜಾಬ್ ಕಿಂಗ್ಸ್ 17.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಪಂಜಾಬ್ ತಂಡ 10 ಪಂದ್ಯಗಳಿಂದ 4 ಜಯ ಹಾಗೂ 6 ಸೋಲಿನೊಂದಿಗೆ 8 ಅಂಕ ಸಂಪಾದಿಸಿ 7ನೇ ಸ್ಥಾನ ಪಡೆದರೆ, ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯಗಳಿಂದ 5 ಸೋಲು ಹಾಗೂ 5 ಜಯದೊಂದಿಗೆ 10 ಅಂಕದೊಂದಿಗೆ 3ನೇ ಸ್ಥಾನದಲ್ಲೇ ಉಳಿದುಕೊಂಡಿತು.
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಂಜಾಬ್ ತಂಡ ಆರಂಭಿಕ ಆಘಾತ ಅನುಭವಿಸಿದರೂ ಜಾನಿ ಬೇರ್ ಸ್ಟೋ ಮತ್ತು ರೀಲೆ ರಾಸ್ಸೊ ಎರಡನೇ ವಿಕೆಟ್ ಗೆ 64 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಜಾನಿ ಬೇರ್ ಸ್ಟೋ 30 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 46 ರನ್ ಗಳಿಸಿದರೆ, ರಾಸ್ಸೊ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿದರು.
ಅಂತಿಮವಾಗಿ ಶಶಾಂಕ್ ಸಿಂಗ್ (ಅಜೇಯ 25) ಮತ್ತು ಸ್ಯಾಮ್ ಕುರನ್ (26) ಮುರಿಯದ 4ನೇ ವಿಕೆಟ್ ಗೆ 50 ರನ್ ಜೊತೆಯಾಟ ನಿಭಾಯಿಸಿದರು.
ಗಾಯಕ್ವಾಡ್ ಆಸರೆ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಅರ್ಧಶತಕದ ಹೊರತಾಗಿಯೂ ಸಾಧಾರಣ ಮೊತ್ತ ಗಳಿಸಿತು.
ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ (29) ಮೊದಲ ವಿಕೆಟ್ ಗೆ 64 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಗಾಯಕ್ವಾಡ್ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 62 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿದರೂ ಸಮೀರ್ ರಿಜ್ವಿ (21), ಮೊಯಿನ್ ಅಲಿ (15) ಮತ್ತು ಧೋನಿ (14) ಹೋರಾಟ ಸಾಕಾಗಲಿಲ್ಲ.