ಆರಂಭಿಕ ಅಭಿಷೇಕ್ ಶರ್ಮ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡ 7 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು 20 ಓವರ್ ಗಳಲ್ಲಿ 132 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಸಾಧಾರಣ ಗುರಿಯನ್ನು 12.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡಕ್ಕೆ ಅಭಿಷೇಕ್ ಶರ್ಮ ಮತ್ತು ಸಂಜು ಸ್ಯಾಮ್ಸನ್ ಮೊದಲ ವಿಕೆಟ್ ಗೆ 41 ರನ್ ಜೊತೆಯಾಟ ನಿಭಾಯಿಸಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ ಖಾತೆ ತೆರೆಯದೇ ನಿರ್ಗಮಿಸಿದಾಗ ಆಘಾತಕ್ಕೆ ಒಳಗಾಗಿತ್ತು. ಆದರೆ ಅಭಿಷೇಕ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಈ ಆತಂಕ ದೂರ ಮಾಡಿದರು.
ಅಭಿಷೇಕ್ ಶರ್ಮ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಅಭಿಷೇಕ್ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 79 ರನ್ ಸಿಡಿಸಿ ಔಟಾದರು.
ತಿಲಕ್ ವರ್ಮಾ 16 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 19 ರನ್ ಬಾರಿಸಿ ಅಜೇಯರಾಗಿ ಉಳಿಯುವ ಮೂಲಕ ಗೆಲುವಿನ ರನ್ ಹೊಡೆದು ಸಂಭ್ರಮಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದು ಪರಿಣಾಮಕಾರಿ ಎನಿಸಿದರೆ, ಅದಿಲ್ ರಶೀದ್ ಅಭಿಷೇಕ್ ವಿಕೆಟ್ ಉರುಳಿಸಿ ನಿಟ್ಟುಸಿರುಬಿಟ್ಟರು.
ಬಟ್ಲರ್ ಅರ್ಧಶತಕದ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೋಸ್ ಬಟ್ಲರ್ ಅರ್ಧಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.
ಜೋಸ್ ಬಟ್ಲರ್ 44 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 68 ರನ್ ಬಾರಿಸಿ ಔಟಾದರೆ, ಹ್ಯಾರಿ ಬ್ರೂಕ್ (17) ಮತ್ತು ಜೋಫ್ರಾ ಆರ್ಚರ್ (12) ಮಾತ್ರ ಎರಡಂಕಿಯ ಮೊತ್ತ ದಾಖಲಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಗಳಿಸಿದರು.