ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ-ಮಗನನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರದ ಪಟ್ಟಣ ಪೋಲೀಸರು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಮಾದಾಪುರ ಗ್ರಾಮದ ಸಮೀಪ ನಡೆದಿದೆ.
ತಾಲೂಕಿನ ಹಿರಿಯೂರು ಗ್ರಾಮದ ನಾಗೇಶ ಅಲಿಯಾಸ್ ಶಿವಪ್ರಸಾದ್ (28) ಹಾಗೂ ಶಿವಪ್ರಸಾದ್ ಅಲಿಯಾಸ್ ಷಡಕ್ಷರಿ (48) ಖೋಟಾ ನೋಟು ಪ್ರಿಂಟ್ ಮಾಡಿ ಪೋಲೀಸರ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.
ಖೋಟಾ ನೋಟ್ ಪ್ರಿಂಟ್ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪಟ್ಟಣ ಠಾಣೆಯ ಸರ್ಕಲ್ ಇನ್ ಸ್ಪಕ್ಟರ್ ಧನಂಜಯ್,ಪಿಎಸ್ ಐ ಜಗದೀಶ್ ದೂಳ್ ಶೆಟ್ಟಿ,ಎಎಸ್ ಐ ಚೆಲುವರಾಜು ಹಾಗು ಸಿಬ್ಬಂದಿ ಜೊತೆಗೂಡಿ ಹಾಗೂ ದಾಳಿಯ ವೇಳೆ ಹಾಜರಿರಲು ಪುರಸಭೆ ಕಚೇರಿಯ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ಮೇಸ್ತ್ರಿ ಸೋಮರಿಗೆ ಮಾಹಿತಿ ನೀಡಿ ಮಾದಾಪುರ ಎಲ್ಲೆಯಲ್ಲಿ ನಾಗೇಶ್ ಮತ್ತು ಶಿವಪ್ರಸಾದ್ ರವರಿಗೆ ಸೇರಿದ ಜಮೀನಿನಲ್ಲಿ ದನ ಕಟ್ಟುವ ಶೆಡ್ ನಿರ್ಮಿಸಿಕೊಂಡು ಖೋಟಾ ನೋಟ್ ಪ್ರಿಂಟ್ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಾತ್ರಿ 8.35 ರ ಸಮಯದಲ್ಲಿ ಹಿರಿಯೂರು ಗ್ರಾಮಕ್ಕೆ ಹೋದ ಪೋಲೀಸರ ತಂಡ ಅಲ್ಲಿಂದ ಮಾದಾಪುರ ಕಡೆಗೆ ಹೋಗಿ ಮುಖ್ಯ ರಸ್ತೆಗೆ ಸೇರಿರುವ ಕೂಡು ರಸ್ತೆಯ ಜಮೀನಿನ ರಸ್ತೆಯಲ್ಲಿ ಸುಮಾರು 100 ಮೀಟರ್ ದೂರದ ಶೆಡ್ ವೊಂದರಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದ ವೇಳೆ ಶೆಡ್ ನ್ನು ಸುತ್ತುವರೆದು ಕಾರ್ಯಾಚರಣೆ ಮಾಡಿದ್ದಾರೆ.
ಈ ವೇಳೆ ಶೆಡ್ ನಲ್ಲಿ ಅಕ್ರಮಚಟುವಟಿಕೆಯಲ್ಲಿ ತೊಡಗಿದ್ದ ಹಿರಿಯೂರು ಗ್ರಾಮದ ನಾಗೇಶ್ ಹಾಗು ಶಿವ ಪ್ರಸಾದ್ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು ತಾವು ಮಲಗಿಕೊಳ್ಳಲು ಹಾಸಿಕೊಂಡಿದ್ದ ಹಾಸಿಗೆಯ ಪಕ್ಕದಲ್ಲಿ ರಟ್ಟಿನ ಬಾಕ್ಸ್ ಒಳಗಡೆ ಖೋಟಾ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಸಾಧನಗಳು ಪತ್ತೆಯಾಗಿವೆ.
ಬಂಧಿತರಿಂದ ಒಂದು ಕಪ್ಪು ಬಣ್ಣದ ಎಪ್ಸನ್ ಕಲರ್ ಪ್ರಿಂಟರ್,ಕಪ್ಪು ಬಣ್ಣದ ಪೇಪರ್ ಮೆಷರ್ ಮೆಂಟ್ ಕಟಿಂಗ್ ಸ್ಕೇಲ್,ಎ4 ಅಳತೆಯ ಗಾಂಧೀಜಿ ಭಾವಚಿತ್ರದ ವಾಟರ್ ಮಾರ್ಕ್ ಮತ್ತು ನೋಟಿನ ಗೆರೆಯುಳ್ಳ ಬಿಳಿ ಬಣ್ಣದ ಹಾಳೆ,4 ಕಲರ್ ಇಂಕ್ ಬಾಟೆಲ್, ಎ4 ಸೈಜ್ ಅಳತೆಯ 19 ಸಂಖ್ಯೆಯ ಬಿಳಿ ಹಾಳೆಗಳು ಹಾಗೂ ಅಸಲೀ ನೋಟುಗಳಂತೆ ಕಾಣುವ 25,500 ರೂ.ಮೌಲ್ಯದ 51 ಖೋಟಾ ನೋಟುಗಳೊಂದಿಗೆ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡ ಪೋಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.