ಸಾಲಗಾರರ ಕಾಟ ತಾಳಲಾರದೇ ದಂಪತಿ ಘಟಪ್ರಭಾ ನದಿಯ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಮುಧೋಳ ನಗರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮಲ್ಲಪ್ಪ ಲಾಳಿ (56) ಮತ್ತು ಪತ್ನಿ ಮಹಾದೇವಿ (51) ಯಾದಬಾಡ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಮದುವೆಗಾಗಿ ದಂಪತಿ ಅಲ್ಲಲ್ಲಿ ಸಾಲ ಮಾಡಿದ್ದರು. ಸಾಲ ನೀಡಿದವರ ಕಿರುಕುಳ ತಾಳಲಾರದೇ ದಂಪತಿ ಬುಧವಾರ ರಾತ್ರಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾರೆ.
ದಂಪತಿ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಸಾಲಕ್ಕಾಗಿ ಕಿರುಕುಳ ನೀಡುತ್ತಿದ್ದವರ ಹೆಸರು ಉಲ್ಲೇಖಿಸಿದ್ದು, ಕೊನೆಯಲ್ಲಿ ಮಕ್ಕಳಿಗೆ “ನಮ್ಮನ್ನು ಕ್ಷಮಿಸಿ” ಎಂದು ಬರೆದಿದ್ದರೆ. ಮುಧೋಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.