ತೀವ್ರ ಜಿದ್ದಾಜಿದ್ದಿನ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 1 ರನ್ ನಿಂದ ರೋಚಕ ಜಯ ಸಾಧಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಹೈದರಾಬಾದ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ್ ರಾಯಲ್ಸ್ 1 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಮೂರನೇ ವಿಕೆಟ್ ಗೆ 134 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನ ಹಾದಿಗೆ ತಂದು ನಿಲ್ಲಿಸಿದರು.
ಜೈಸ್ವಾಲ್ 40 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 67 ರನ್ ಬಾರಿಸಿ ಔಟಾದರೆ, ರಿಯಾನ್ ಪರಾಗ್ 49 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 77 ರನ್ ಗಳಿಸಿದರು.
ಇವರಿಬ್ಬರು ಔಟಾಗುತ್ತಿದ್ಧಂತೆ ರಾಜಸ್ಥಾನ್ ತಂಡ ಮತ್ತೆ ನಾಟಕೀಯ ಕುಸಿತ ಅನುಭವಿಸಿದ್ದರಿಂದ ಪಂದ್ಯ ತೂಗುಯ್ಯಾಲೆ ತಲುಪಿತು. ಪಂದ್ಯದ ಕೊನೆಯ ಓವರ್ ನಲ್ಲಿ ಗೆಲ್ಲಲು 19 ರನ್ ಬೇಕಿತ್ತು. ಭುವನೇಶ್ವರ್ ಕುಮಾರ್ ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಪೊವೆಲ್ ಅವರನ್ನು ಎಲ್ ಬಿ ಬಲೆಗೆ ಬೀಳಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಟ್ರಾವಿಡ್ ಹೆಡ್ ಮತ್ತು ನಿತಿಶ್ ಕುಮಾರ್ ರೆಡ್ಡಿ ಅರ್ಧಶತಕಗಳ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು.
ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 58 ರನ್ ಬಾರಿಸಿದರು. ನಿತಿಶ್ ಕುಮಾರ್ ರೆಡ್ಡಿ 42 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 76 ರನ್ ಸಿಡಿಸಿದರೆ, ಹೆನ್ರಿಚ್ ಕ್ಲಾಸೆನ್ 19 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 42 ರನ್ ಚಚ್ಚಿದರು. ಇವರಿಬ್ಬರು ಮುರಿಯದ 4ನೇ ವಿಕೆಟ್ ಗೆ 70 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.