ಪರಿಚಯಸ್ಥ ಮಹಿಳೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್ ಬಳಿಯ ಖಾಸಗಿ ಹೋಟೆಲ್ ನ ಟೆರೇಸ್ ಮೇಲೆ ಮಹಿಳೆ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದು, ಮಹಿಳೆ ಶುಕ್ರವಾರ ಬೆಳಿಗ್ಗೆ ೫ ಗಂಟೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳಾದ ಶಿವು, ಅಜಿತ್ ಮತ್ತು ವಿಶ್ವಾಸ್ ಅವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ.
33 ವರ್ಷದ ವಿವಾಹಿತ ಮಹಿಳೆ ಕ್ಯಾಟರಿಂಗ್ ಮೂಲಕ ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದು, ಜ್ಯೋತಿ ನಿವಾಸ್ ಜಂಕ್ಷನ್ ಬಳಿ ವಾಹನಕ್ಕೆ ಕಾದು ನಿಂತಿದ್ದರು. ಈ ವೇಳೆ ನಾಲ್ವರು ಹೊರರಾಜ್ಯದ ವ್ಯಕ್ತಿಗಳು ಪರಿಚಯ ಮಾಡಿಕೊಂಡು ಸ್ನೇಹಿತರಂತೆ ನಟಿಸಿ ಜೊತೆಗೆ ಊಟ ಮಾಡುವಂತೆ ಆಹ್ವಾನಿಸಿದ್ದಾರೆ.
ಮಹಿಳೆ ಅವರ ಜೊತೆ ಹೋದಾಗ ಜ್ಯೂಸ್ ನೀಡಿ ಮಾತನಾಡುತ್ತಾ ಆಕೆಯೊಂದಿಗೆ ರಾಸಲೀಲೆ ನಡೆಸಲು ಪ್ರಯತ್ನಿಸಿದ್ದಾರೆ. ಆಕೆ ಒಪ್ಪದೇ ಇದ್ದಾಗ ಹೋಟೆಲ್ ನ ಟೆರೇಸ್ ಮೇಲೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆ ಮನೆಗೆ ಮರಳಿದ ನಂತರ ಗಂಡನ ಬಳಿ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.


