ಕೋಲಾರ: ತಾಲ್ಲೂಕಿನ ವಕ್ಕಲೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಯುವಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮದ ಗೌತಮ್ ಆಲಿಯಾಸ್ ನಾಗೇಂದ್ರಬಾಬು (23) ಮೃತ ಯುವಕ. ವಕ್ಕಲೇರಿಯಲ್ಲಿರುವ ಸನ್ರೈಸ್ ಕ್ಲಿನಿಕ್ನ ಆಯುರ್ವೇದ ವೈದ್ಯ ರಫೀಕ್ ಎಂಬುವರು ನೀಡಿದ್ದ ಚುಚ್ಚುಮದ್ದಿನಿಂದ ಯುವಕ ಮೃತಪಟ್ಟಿದ್ದಾನೆ ಎಂಬುದಾಗಿ ದೂರಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಬೆಳಿಗ್ಗೆಯಿಂದ ಜ್ವರದಿಂದ ಬಳಲುತ್ತಿದ್ದ ನಾಗೇಂದ್ರ, ಸಂಜೆ ಕ್ಲಿನಿಕ್ಗೆ ಹೋಗಿದ್ದಾರೆ. ವೈದ್ಯರು ಇಂಜೆಕ್ಷನ್ ನೀಡಿದ್ದು, ಕೆಲ ಹೊತ್ತಿನಲ್ಲೇ ಯುವಕ ತಲೆತಿರುಗಿ ಬಿದ್ದಿದ್ದಾರೆ. ತಕ್ಷಣವೇ ಕೋಲಾರ ನಗರ ಹೊರವಲಯದಲ್ಲಿರುವ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟಿದ್ದಾರೆ.
‘ಸನ್ರೈಸ್ ಕ್ಲಿನಿಕ್ನ ವೈದ್ಯ ನೀಡಿದ ಇಂಜೆಕ್ಷನ್ನಿಂದಲೇ ಪುತ್ರ ನಾಗೇಂದ್ರಬಾಬು ಮೃತಪಟ್ಟಿದ್ದಾನೆ. ವೈದ್ಯನ ವಿರುದ್ಧ ಕ್ರಮಕೈಗೊಳ್ಳಿ’ ಎಂದು ತಾಯಿ ಕಣ್ಣೀರಿಟ್ಟರು. ವೈದ್ಯನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತನ ಮರಣೋತ್ತರ ಪರೀಕ್ಷೆ ಬಳಿಕ ವರದಿ ಆಧಾರದ ಮೇಲೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ.


