ಕೋಲಾರ: ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ಸರಕಾರ ಕೂಡ ಉಗ್ರ ಪ್ರತಿಭಟನೆ ನಡೆಸುತ್ತದೆ. ಅಲ್ಲದೆ ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಸೋಮವಾರ ರಾಜ್ಯಮಟ್ಟದ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದವರು ಸದಾ ತಗಾದೆ ತೆಗೆಯುತ್ತಿರುತ್ತಾರೆ. ನಮ್ಮ ರಾಜ್ಯದೊಳಗೆ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿರುವ ಪ್ರಶ್ನೆಗೆ, ಎಸ್‌ಸಿಪಿ ಟಿಎಸ್‌ಪಿ ಅನುದಾನ ನೀಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ದಲಿತರ ಬಗ್ಗೆ ಸಿದ್ದರಾಮಯ್ಯ ಅವರಿಗಿರುವಷ್ಟು ಕಾಳಜಿ ಬೇರೆ ಯಾರಿಗೆ ಇದೆ ಹೇಳಿ. ಶೇ.೧ರಷ್ಟು ಕಾಳಜಿಯು ಉಳಿದ ಪಕ್ಷದವರಿಗೆ ಇಲ್ಲ ಎಂದು ಹೇಳಿದರು.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಯಾವುದೇ ಕಾರ್ಯಕ್ರಮಕ್ಕೆ ಬರುತ್ತಿಲ್ಲ, ಸಹಕಾರ ನೀಡುತ್ತಿಲ್ಲ ಎಂಬ ಪ್ರಶ್ನೆಗೆ, ಕೆ.ವೈ.ನಂಜೇಗೌಡರು ಬೇರೆ ಕೆಲಸದ ಮೇಲೆ ಹೊರ ಹೋಗಿದ್ದಾರೆ. ಕಾಂಗ್ರೆಸ್ ಸರಕಾರ ಇರುವುದೇ ಜನರ ಅಭಿವೃದ್ಧಿಗೆ. ನಾನು ಬರಲಿ ಅಥವಾ ಬೇರೆ ಯಾರೇ ಬರಲಿ, ಬಾರದಿರಲಿ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು ಅಷ್ಟೆ ಎಂದರು.


