ರಾಜಕೀಯ ಷಡ್ಯಂತ್ರ ಮಾಡಿ ನನ್ನ ರಾಜಕೀಯ ಭವಿಷ್ಯ ಹಾಳು ಮಾಡಿದ್ದೀರಿ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ ಮಾರ್ಚ್ 28ರಂದು ಪ್ರಕರಣ ದಾಖಲಿಸಿದ್ದರು. ಸಾಕ್ಷ್ಯ ಇಲ್ಲದ ಕಾರಣ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದರು.
ನಮ್ಮ ರಾಜಕೀಯ ಜೀವನ ಮುಗಿಸಲು ಮಾಡಿದ ಷಡ್ಯಂತ್ರ ಇದಾಗಿದೆ. ನಮ್ಮ ವಿರುದ್ಧದ ಆರೋಪದಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ. ಆದರೂ ಬಂಧಿಸಿ ನನ್ನ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಈಗ ಏನು ಹೇಳಿ ಪ್ರಯೋಜನ? ಹೊರಗೆ ಬಂದ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದು ರೇವಣ್ಣ ಹೇಳಿದರು.
ನ್ಯಾಯಾಧೀಶರ ಮುಂದೆ ಭಾನುವಾರ ಹಾಜರುಪಡಿಸಿದಾಗ ಕಣ್ಣೀರು ಹಾಕಿದ ರೇವಣ್ಣ, ಸುಮಾರು 45 ನಿಮಿಷಗಳ ಕಾಲ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.