ಕರ್ನಾಟಕದ ಕರುಣ್ ನಾಯರ್ ರಣಜಿ ಟ್ರೋಫಿ ಫೈನಲ್ ನಲ್ಲಿ ಕೇರಳ ವಿರುದ್ಧ ಶತಕ ಸಿಡಿಸುವ ಮೂಲಕ ಒಂದೇ ವರ್ಷದಲ್ಲಿ 9ನೇ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಭಾರತದ ಪರ ತ್ರಿಶತಕ ಸಿಡಿಸಿದ ಕರುಣ್ ನಾಯರ್ ಕೇರಳ ವಿರುದ್ಧದ ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡದ ಪರ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ನಾಗ್ಪುರದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕರುಣ್ ನಾಯರ್ ಅಜೇಯ 132 ರನ್ ಸಿಡಿಸಿದರು. ಇದರೊಂದಿಗೆ ವಿದರ್ಭ 2ನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಗೆ 249 ರನ್ ಗಳಿಸಿದ್ದು, 286 ರನ್ ಮುನ್ನಡೆಯೊಂದಿಗೆ ಸುಸ್ಥಿತಿಗೆ ತಲುಪಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ವಿದರ್ಭ 3ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಹೊಂದಿದೆ.
ಕರುಣ್ ನಾಯರ್ ರಣಜಿಯಲ್ಲಿ ಸಿಡಿಸಿದ 4ನೇ ಶತಕವಾಗಿದೆ. ಅಲ್ಲದೇ ಒಂದೇ ವರ್ಷದಲ್ಲಿ ಗಳಿಸಿದ 9ನೇ ಹಾಗೂ ಒಟ್ಟಾರೆ 23ನೇ ಶತಕವಾಗಿದೆ. ಇದೇ ವೇಳೆ ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 8000 ರನ್ ಪೂರೈಸಿದ ಮತ್ತೊಂದು ಸಾಧನೆ ಮಾಡಿದರು.
184 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ ಶತಕ ಪೂರೈಸಿದ ಕರುಣ್ ನಾಯರ್, ೨೮೦ ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 132 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ದಾನಿಶ್ ಜೊತೆ 3ನೇ ವಿಕೆಟ್ ಗೆ 182 ರನ್ ಜೊತೆಯಾಟದಿಂದ ಕರುಣ್ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ನಾಯರ್ ಮೊದಲ ಇನಿಂಗ್ಸ್ ನಲ್ಲಿ 86 ರನ್ ಗಳಿಸಿದ್ದರು.


