ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ಜೆಸ್ ಜೊನಸೆನ್ ಅವರ ಅಜೇಯ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಡಬ್ಲೂಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಪ್ರವೇಶಿಸಿದರೆ, ತವರಿನ ಅಭಿಮಾನಿಗಳ ಸಮ್ಮುಖದಲ್ಲೂ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಆರ್ ಸಿಬಿ ತಂಡ ಸತತ ನಾಲ್ಕನೇ ಸೋಲುಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಇಳಿದ ಆರ್ ಸಿಬಿ ಎಲ್ಸಿ ಪೆರ್ರಿ ಅವರ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು.
ಸುಲಭ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4.3 ಓವರ್ ಗಳು ಬಾಕಿ ಇರುವಂತೆಯೇ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲಿನೊಂದಿಗೆ 10 ಅಂಕದೊಂದಿಗೆ ಪ್ಲೇಆಫ್ ಪ್ರವೇಶಿಸಿತು.
ಹಾಲಿ ಚಾಂಪಿಯನ್ ಆರ್ ಸಿಬಿ 6 ಪಂದ್ಯಗಳಲ್ಲಿ 2 ಜಯ ಹಾಗೂ 4 ಸೋಲಿನೊಂದಿಗೆ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇಆಫ್ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕಿ ಮೆಗ್ ಲೆನ್ನಿಂಗ್ (2) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾದರೂ ಶೆಫಾಲಿ ವರ್ಮ ಮತ್ತು ಜೆಸ್ಸಿ ಜೊನಾಸೆನ್ ಮುರಿಯದ 2ನೇ ವಿಕೆಟ್ ಗೆ 146 ರನ್ ಗಳ ಅಮೋಘ ಜೊತೆಯಾಟ ನಿಭಾಯಿಸಿದರು.
ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 80 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಜೆಸ್ಸಿ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 61 ರನ್ ಸಿಡಿಸಿ ಔಟಾಗದೇ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ತಂಡ ಆರಂಭದಿಂದಲೂ ರನ್ ಗಳಿಸಲು ಪರದಾಡಿತು. ಅಲ್ಲದೇ ಹೊಂದಾಣಿಕೆ ಕೊರತೆಯಿಂದ ಬೃಹತ್ ಮೊತ್ತ ಗಳಿಸಲು ವಿಫಲವಾಯಿತು. ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ಸತತ ಎಡವುತ್ತಿರುವುದು ಈ ಪಂದ್ಯದಲ್ಲೂ ಮುಂದುವರಿಯಿತು.
ಮಧ್ಯಮ ಕ್ರಮಾಂಕದಲ್ಲಿ ಎಲ್ಸಿ ಪೆರ್ರಿ 47 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 60 ರನ್ ಬಾರಿಸಿ ಔಟಾಗದೇ ಉಳಿದರು. ಆದರೆ ಕೊನೆಯ 5 ಓವರ್ ಗಳಲ್ಲಿ ಅವರಿಗೆ ಬೆರಳೆಣಿಕೆ ಎಸೆತಗಳನ್ನು ಎದುರಿಸಲು ಸಿಕ್ಕಿದ್ದು, ತಂಡ ಬೃಹತ್ ಮೊತ್ತ ಪೇರಿಸಲು ವಿಫಲವಾಗಿದ್ದು ಮತ್ತೊಂದು ಕಾರಣವಾಯಿತು.


