ಭಾರತದ ಪುರುಷ ಮತ್ತು ಮಹಿಳೆಯರ 4X400 ರಿಲೇ ತಂಡ ವಿಶ್ವ ಅಥ್ಲೆಟಿಕ್ಸ್ ರಿಲೇಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಸಾಧನೆ ಮಾಡಿವೆ.
ಭಾನುವಾರ ನಡೆದ ಸ್ಪರ್ಧೆಗಳಲ್ಲಿ ರುಪಾಲ್ ಚೌಧರಿ, ಎಂ.ಆರ್. ಪೂವಮ್ಮ, ಜ್ಯೋತಿಕಾ ಶ್ರೀ ದಾಂಡಿ ಮತ್ತು ಶುಭಾ ವೆಂಕಟೇಶ್ ಅವರನ್ನೊಳಗೊಂಡ ರಿಲೇ ತಂಡ ಹೀಟ್ಸ್ ನಲ್ಲಿ 3 ನಿಮಿಷ 29.35 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರೆ, ಜಮೈಕಾ ತಂಡ 3 ನಿಮಿಷ 28.54 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಿಟ್ಟಿಸಿ ಎರಡೂ ತಂಡಗಳು ಒಲಿಂಪಿಕ್ಸ್ ಗೆ ಅರ್ಹತೆ ಪಡೆದವು.
ನಂತರ ನಡೆದ ಪುರುಷರ ವಿಭಾಗದ ರಿಲೇಯ ಹೀಟ್ಸ್ ನಲ್ಲಿ ಮುಹಮ್ಮದ್ ಅನ್ಸ್ ಯಾಹಿಯಾ, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಜ್ ಜೇಕಬ್ ಅವರನ್ನೊಳಗೊಂಡ ತಂಡ 3 ನಿಮಿಷ 3.23 ಸೆಕೆಂಡ್ ಗಳಲ್ಲಿ ಎರಡನೇ ಸ್ಥಾನ ಪಡೆದರೆ, ಅಮೆರಿಕದ ತಂಡ 2 ನಿಮಿಷ 59.95 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನದೊಂದಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದವು.
ಮಹಿಳಾ ತಂಡ ಮೊದಲ ಸುತ್ತಿನ ಅರ್ಹತಾ ಸುತ್ತಿನಲ್ಲಿ 3 ನಿಮಿಷ 29.74 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡರೆ, ಪುರುಷರ ತಂಡ ರಾಜೇಶ್ ರಮೇಶ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ ರೇಸ್ ಪೂರ್ಣಗೊಳಿಸಲು ವಿಫಲವಾಯಿತು.