Thursday, December 25, 2025
Google search engine
Homeಬೆಂಗಳೂರುಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆ: ಮುನ್ನೆಚ್ಚರಿಕೆ ವಹಿಸಲು ತುಷಾರ್ ಗಿರಿನಾಥ್ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆ: ಮುನ್ನೆಚ್ಚರಿಕೆ ವಹಿಸಲು ತುಷಾರ್ ಗಿರಿನಾಥ್ ಸೂಚನೆ

ಬೆಂಗಳೂರು: ನಗರದಲ್ಲಿ ಮಳೆಯಾಗಿರುವ ಹಿನ್ನೆಲೆ ಎಲ್ಲಾ ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಸೂಚನೆ ನೀಡಿದ್ದಾರೆ.

ರಸ್ತೆ ಮೂಲಭೂತ ಸೌಕರ್ಯ ಮತ್ತು ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ಗಳು ಹಾಗೂ ಅರಣ್ಯ ವಿಭಾಗದ ಸಿಬ್ಬಂದಿಗಳು, ತಕ್ಷಣವೇ ಪರಿಶೀಲನೆ ನಡೆಸಬೇಕು. ರಸ್ತೆಗಳಲ್ಲಿ ನೀರು ನಿಂತಿರುವ ಹಾಗೂ ಮರ, ಮರದ ಕೊಂಬೆಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದ್ದಾರೆ.

ವಾರ್ಡ್ ರಸ್ತೆಗಳು ಮತ್ತು ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛವಾಗಿಡಬೇಕು. ಮಳೆಯಿಂದ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಇರುವ ಸಮಸ್ಯೆಯನ್ನು ಬಗೆಹರಿಸು ಸೂಚಿಸಿದ್ದಾರೆ.

ಪಾಲಿಕೆಯ ಎಲ್ಲಾ 8 ವಲಯಗಳ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ್ದಾರೆ.

ತ್ವರಿತ ಮುಂಜಾಗ್ರತಾ ಕ್ರಮ:

ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇಂದು ಸಂಜೆ ಕೆಲವೆಡೆ ಜೋರು ಮಳೆಯಾಗಿದ್ದು, ರಸ್ತೆಯಲ್ಲಿ ನಿಂತಿರುವ ನೀರು, ಧರೆಗುರುಳಿದ ಮರಗಳು, ರೆಂಬೆ ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳು ಸ್ಥಳದಲ್ಲಿದ್ದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ.

ಯಲಹಂಕ ವಲಯದಲ್ಲಿ ಹೆಚ್ಚು ಮಳೆ:

ಯಲಹಂಕ ವಲಯದ ಜಕ್ಕೂರು ವ್ಯಾಪ್ತಿಯಲ್ಲಿ 46 ಎಂ.ಎಂ ಮಳೆಯಾಗಿದ್ದು, ಕೋಗಿಲು ಜಂಕ್ಷನ್ ನಲ್ಲಿ ಜಲಾವೃತವಾಗಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈ ಸಂಬಂಧ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ನಿಯಂತ್ರಣ ಕೊಠಡಿಗೆ ತೆರಳಿ ಮೇಲ್ವಿಚಾರಣೆ ಮಾಡದ್ದಾರೆ. ಜೊತೆಗೆ ಸಮಸ್ಯೆಯಾಗಿರುವ ಸ್ಥಳಗಳಾದ ಕೋಗಿಲು ಜಂಕ್ಷನ್ ಹಾಗು ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಗಿಲು ಜಂಕ್ಷನ್ ನಲ್ಲಾಗಿದ್ದ ಸಮಸ್ಯೆಯನ್ನು ಕೂಡಲೆ ಬಗೆಹರಿಸಲಾಗಿದೆ.

ನಗರದಲ್ಲಿ 30 ಮರ ಹಾಗೂ 42 ರೆಂಬೆ/ಕೊಂಬೆಗಳು ಧರೆಗುರುಳಿದ್ದು, ಅರಣ್ಯ ವಿಭಾಗದ ಸಿಬ್ಬಂದಿಗಳು ತೆರವು ಕಾರ್ಯಾಚರಣೆಯನ್ನು ಸಕ್ರಿಯವಾಗಿ ನಡೆಸುತ್ತಿದ್ದಾರೆ.

ಮರ ಬಿದ್ದು ಮಗು ಸಾವು:

ಪೂರ್ವ ವಲಯದ ಜೀವನ್ ಭೀಮಾ ನಗರ ವ್ಯಾಪ್ತಿಯಲ್ಲಿ ಮಳೆಯಲ್ಲಿ ಸತ್ಯ ಎಂಬುವವರು ರಕ್ಷ ಎಂಬ 3 ವರ್ಷದ ಮಗುವಿನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಮರ ಬಿದ್ದಿರುತ್ತದೆ. ಈ ಸಂಬಂಧ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಾಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸತ್ಯ ರವರಿಗೆ ಸಣ್ಣ-ಪುಟ್ಟ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ಪೂರ್ವ ವಲಯ ಜಂಟಿ ಆಯುಕ್ತರಾದ ಸರೋಜ, ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ‌‌.ಎಲ್.ಜಿ ಸ್ವಾಮಿ ಹಾಗೂ ಅರಣ್ಯ ವಿಭಾಗ ಅಧಿಕಾರಿಗಳು ಸ್ಥಳದಲ್ಲಿದ್ದು, ಖುದ್ದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

1533 ಗೆ ಕರೆ ಮಾಡಿ

ನಗರದಲ್ಲಿ ಮಳೆಯಿಂದ ಏನಾದರು ಸಮಸ್ಯೆಯಾಗಿದ್ದರೆ ಕೂಡಲೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಗೆ ಕರೆ ಮಾಡಿ ದೂರು ನೀಡಬಹುದು. ಇದರ ಜೊತೆಗೆ ಪಾಲಿಕೆ 8 ವಲಯಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments