ಬೆಂಗಳೂರು:ಚಿನ್ನ ಅಕ್ರಮ ಕಳ್ಳಸಾಗಣೆ ಪ್ರಕರಣದ ಆರೋಪಿ ಡಿಜಿಪಿ ಮಲಮಗಳು ನಟಿ ರನ್ಯಾ ರಾವ್ ಜಾಮೀನು ಅರ್ಜಿಯನ್ನು ನಗರದ 64 ನೇ ಸಿಸಿಹೆಚ್ ನ್ಯಾಯಾಲಯವು ವಜಾ ಮಾಡಿದೆ.
ಇದರಿಂದ ನಟಿ ರನ್ಯಾ ರಾವ್ ಇನ್ನು ಕೆಲ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕಳೆಯಬೇಕಾಗಿದೆ.
ನಟಿ ರನ್ಯಾ ರಾವ್ ಕೇಸ್ ನಲ್ಲಿ ಅಂತರರಾಷ್ಟ್ರೀಯ ಲಿಂಕ್ ಗಳು ಇವೆ, ಕಸ್ಟಮ್ಸ್ ಬ್ಯಾಬೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ,
ಹೊರ ಬಂದಲ್ಲಿ ಸಾಕ್ಷಿ ನಾಶ ಮತ್ತು ತನಿಖೆಯ ಹಾದಿ ತಪ್ಪಿಸಬಹುದು. ಆಕೆ ಒಂದು ವರ್ಷದ ಅವಧಿಯಲ್ಲಿ ಇಪತ್ತೇಳು ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ,
ಈಕೆಯಿಂದ ಶೇ 38 ರಷ್ಟು ಕಸ್ಟಮ್ಸ್ ಸುಂಕ ವಂಚನೆ ಸೇರಿ ಒಟ್ಟು 4,83,72,694 ರೂ ಸುಂಕ ವಂಚನೆ ಆಗಿದೆ. ಜಾಮೀನು ಕೊಟ್ಟರೆ ದೇಶ ಬಿಡುವ ಸಾಧ್ಯತೆ ಇದೆ.
ಪ್ರಭಾವಿಗಳು ಪ್ರಕರಣದಲ್ಲಿದ್ದು ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜಾಮೀನು ಅರ್ಜಿ ವಜಾಗೊಂಡಿದೆ.
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅನ್ನು ಡಿಆರ್‌ಐ ಅಧಿಕಾರಿಗಳು ಮಾರ್ಚ್ 3 ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಆ ಬಳಿಕ ನಡೆದ ತನಿಖೆಯಲ್ಲಿ ಹಲವು ಆಘಾತಕಾರಿ ಅಂಶಗಳು ಹೊರಬಂದಿದ್ದವು.
ನಟಿ ರನ್ಯಾ ರಾವ್ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಳು. ನಟಿ ರನ್ಯಾ ರಾವ್, ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸವಲತ್ತುಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ಆ ನಂತರ ಬಹಿರಂಗವಾಗಿತ್ತು.
ರನ್ಯಾ ರಾವ್ ಹಿಂದೆ ಕೆಲವು ಸಚಿವರು, ಶಾಸಕರು ಇರುವ ವಿಷಯ ಸಹ ಸುದ್ದು ಮಾಡಿತು. ರನ್ಯಾ ರಾವ್ ಬಂಧನ ಪ್ರಕರಣ ವಿಧಾನಸಭೆಯಲ್ಲಿಯೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ರನ್ಯಾ ರಾವ್ಗೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಈ ಹಿಂದೆ ಇದ್ದ ಸರ್ಕಾರ 12 ಎಕರೆ ಜಮೀನು ಮಂಜೂರು ಮಾಡಿದ ವಿಷಯವೂ ಬಹಿರಂಗವಾಯ್ತು. ಮಾತ್ರವಲ್ಲದೆ, ಸರ್ಕಾರಿ ಅಧಿಕಾರಿಗಳನ್ನು, ವಿಶೇಷವಾಗಿ ಪೊಲೀಸ್ ವಾಹನಗಳು, ಸಿಬ್ಬಂದಿಗಳನ್ನು ನಟಿ ರನ್ಯಾ ತನ್ನ ಖಾಸಗಿ ವಿಷಯಗಳಿಗೆ ಬಳಸಿಕೊಂಡ ವಿಷಯಗಳು ತನಿಖೆಯಿಂದ ಬಹಿರಂಗವಾಗಿ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದವು.
ಸಾಹಿಲ್ ಜೈನ್ ಗೆ ಗ್ರಿಲ್:
ಈ ನಡುವೆ ಚಿನ್ನ ಅಕ್ರಮ ಸಾಗಾಣೆ ಸಂಬಂಧ ಬಂಧಿತ ಸಾಹಿಲ್ ಜೈನ್ ನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆಚಿನ್ನದ ವ್ಯಾಪಾರಿಯಾಗಿರುವ ಜೈನ್ ನಟಿ ರನ್ಯಾ ರಾವ್ ಕಳ್ಳಸಾಗಣೆ ಮಾಡಿದ ಚಿನ್ನವನ್ನು ವಿಲೇವಾರಿ ಮಾಡಲು ಮತ್ತು ಮಾರಾಟದ ಆದಾಯವನ್ನು ಹಂಚಿಕೊಳ್ಳಲು ಸಹಾಯ ಮತ್ತು ಪ್ರೋತ್ಸಾಹ ನೀಡಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬೈನಲ್ಲಿ ವಾಸಿಸುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬೈನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ.
ಕಸ್ಟಮ್ಸ್ ಅಧಿಕಾರಿಗಳು ಮುಂಬೈ ಏರ್ಪೋರ್ಟ್ನಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿಯೇ ಸಾಹಿಲ್ ಜೈನ್ ಬಂಧಿತನಾಗಿದ್ದ.
ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರೋ ಹಿನ್ನೆಲೆ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಸದ್ಯ ಸಾಹಿಲ್ ಜೈನ್ ವಶಕ್ಕೆ ಪಡೆದಿರುವ ಡಿಆರ್‌ಐ ಅಧಿಕಾರಿಗಳು ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್‌ಗೂ ನೋಟೀಸ್ ಕೊಟ್ಟಿದ್ದಾರೆ


