ದೇಶವನ್ನು ಕಾಡುತ್ತಿದ್ದ ಬಿಸಿಗಾಳಿ ಕಂಟಕ ಅಂತ್ಯಗೊಂಡಿದ್ದು, ದೇಶದ ಹಲವು ರಾಜ್ಯಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.
ಪಶ್ಚಿಮ ರಾಜಸ್ಥಾನ ಮತ್ತು ಕೇರಳದಲ್ಲಿ ಮಾತ್ರ ಬಿಸಿಗಾಳಿ ಪ್ರಮಾಣ ಮುಂದುವರಿದಿದ್ದು, ಉಳಿದೆಡೆ ಕಡಿಮೆ ಆಗಿದೆ. ಮತ್ತೊಂದೆಡೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಇದರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದೇಶದ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಏಕೆಂದರೆ ಬಿಸಿಗಾಳಿ ಪ್ರಮಾಣ ತಗ್ಗಿದ್ದರೂ ಅದರ ಪ್ರಭಾವ ಎಷ್ಟು ಕಡಿಮೆ ಆಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತಗಳ ರಾಜ್ಯಗಳು ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಇನ್ನೂ ಕೆಲವು ದಿನ ಮಳೆಯಾಗಲಿದೆ. ಅಲ್ಲದೇ ಭಾರೀ ಸಿಡಿಲು-ಗುಡುಗು ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸೂಚನೆ ದೊರೆತಿದ್ದು, ಇದರಿಂದ ಉತ್ತರಾಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಮೇಘಾಲಯ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಪರಿಣಾಮ ಉಂಟಾಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.