ದಾವಣಗೆರೆ: ಬೇಕರಿ ನಡೆಸಲು ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ನ್ಯಾಮತಿಯ ಎಸ್ ಬಿಐ ಬ್ಯಾಂಕ್ ದರೋಡೆ ಮಾಡಿದ್ದ ಸೋದರರು ಸೇರಿದಂತೆ 6 ಮಂದಿಯನ್ನು ದಾವಣಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯಾಮತಿ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಅಜಯ್ ಕುಮಾರ್ ಮತ್ತು ತಮಿಳುನಾಡು ಮೂಲದ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದ್ದು, ದರೋಡೆ ಮಾಡಲಾಗಿದ್ದ 22 ಕೆಜಿ ಪೈಕಿ 17.7 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ನ್ಯಾಮತಿಯಲ್ಲಿ ಬೇಕರಿ ನಡೆಸುತ್ತಿದ್ದ ವಿಜಯ್ ಹಾಗೂ ಸೋದರ ಅಜಯ್ ನಷ್ಟದಲ್ಲಿದ್ದು, ಬೇಕರಿಯನ್ನು ಅಭಿವೃದ್ಧಿಪಡಿಸಿ ನಷ್ಟದಿಂದ ಹೊರಗೆ ಬರಲು ಬ್ಯಾಂಕ್ ಸಾಲಕ್ಕೆ ಮನವಿ ಮಾಡಿದ್ದರು. ಆದರೆ ಸಿಬಿಲ್ ಸ್ಕೋರ್ ಕಡಿಮೆ ಇದ್ದ ಕಾರಣ ಎರಡು ಬಾರಿ ಸಲ್ಲಿಸಿದ್ದ ಸಾಲ ಅರ್ಜಿ ತಿರಸ್ಕೃತಗೊಂಡಿತ್ತು.
ಬ್ಯಾಂಕ್ ಸಾಲ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ದರೋಡೆ ಮಾಡಲು ಸೋದರರು ನಿರ್ಧರಿಸಿದ್ದು, ಇದಕ್ಕಾಗಿ ತಮಿಳುನಾಡು ಮೂಲದ ಗ್ಯಾಂಗ್ ಸಂಪರ್ಕಿಸಿದ್ದರು. ಅಲ್ಲದೇ ಯೂಟ್ಯೂಬ್ ಮತ್ತು ನೆಟ್ ಫ್ಲಿಕ್ಸ್ ಗಳಲ್ಲಿ ದರೋಡೆ ಮಾಡುವುದು ಹೇಗೆ ಎಂದು ಸಿನಿಮಾ ಹಾಗೂ ವೀಡಿಯೋಗಳನ್ನು ನೋಡಿ ಸಂಚು ರೂಪಿಸಿದ್ದರು.
ಕಳೆದ ನವೆಂಬರ್ ನಲ್ಲಿ ನ್ಯಾಮತಿ ಎಸ್ ಬಿಐ ಬ್ಯಾಂಕ್ ದರೋಡೆ ಮಾಡಿದ್ದ ಸೋದರರ ಗ್ಯಾಂಗ್ ಬ್ಯಾಂಕ್ ನಲ್ಲಿ ಖಾರದಪುಡಿ ಎರಚಿ ಸಾಕ್ಷ್ಯ ದೊರೆಯದಂತೆ ಮಾಡಿದ್ದರು. ಅಲ್ಲದೇ ಬ್ಯಾಂಕ್ ನಿಂದ 3 ಕಿ.ಮೀ. ದೂರದಲ್ಲೇ ಕಾರಿನಲ್ಲಿ ಕದ್ದ ಚಿನ್ನಾಭರಣ ಇರಿಸಿದ್ದರು. ನಂತರ ತಮಿಳುನಾಡಿನ ಮದುರೈನ ಪಾಳುಬಾವಿಯಲ್ಲಿ ಚಿನ್ನಾಭರಣ ಮುಚ್ಚಿಟ್ಟಿದ್ದರು.
ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಕಷ್ಟವಾಗಿದ್ದರೂ ಪಟ್ಟುಬಿಡದ ದಾವಣಗೆರೆ ಪೊಲೀಸರು 5 ತಿಂಗಳ ಸತತ ಪ್ರಯತ್ನದ ನಂತರ ದರೋಡೆ ಪ್ರಕರಣವನ್ನು ಭೇದಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ, ನಕ್ಲೇಸ್, ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದಾರೆ.


