Thursday, December 25, 2025
Google search engine
Homeಬೆಂಗಳೂರುಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ: ಡಿಕೆ ಶಿವಕುಮಾರ್

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ: ಡಿಕೆ ಶಿವಕುಮಾರ್

ಬೆಂಗಳೂರು: “ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರತಿನಿಧಿಗಳ ನಿಯೋಗವು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದರು. ಈ ವೇಳೆ ನಾರಾಯಣಪುರ ಬಸವಸಾಗರ ಜಲಾಶಯದ ಬಲದಂಡೆ ಹಾಗೂ ಎಡದಂಡೆಯಿಂದ ಏ.15ರವರೆಗೆ ಬೆಳೆಗಳಿಗೆ ನೀರು ಹರಿಸಬೇಕು ಎಂದು ಮನವಿ ಸಲ್ಲಿಸಿದರು.

ನಂತರ ಕೃಷ್ಣಾ ನೀರಿನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು.

“ಹೌದು, ಸಿದ್ದರಾಮಯ್ಯ ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ. ಸಚಿವರು, ಶಾಸಕರು, ರೈತಸಂಘದ ಪ್ರತಿನಿಧಿಗಳು ಬಂದು ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಎರಡನೇ ಬೆಳೆ ಹಾಕಬೇಡಿ ಎಂದರೂ ಈ ಭಾಗದ ರೈತರು ಬೆಳೆ ಹಾಕಿಕೊಂಡಿದ್ದಾರೆ. ಈಗ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ಜನ ಕಾಲುವೆಗೆ ನೀರು ಹರಿಸುವಂತೆ ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದವರಿಗೆ ಪತ್ರ ಬರೆಯಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇವೆ. ಈ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.

ಈ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತೀರಾ ಎಂದು ಕೇಳಿದಾಗ, “ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದಕ್ಕಿಂತ ಅಕ್ಕಪಕ್ಕದ ರಾಜ್ಯಗಳು ಪರಸ್ಪರ ಅನುಸರಿಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

ಮನವಿ ಪತ್ರದ ಸಾರಾಂಶ:

“ನಾರಾಯಣಪುರ ಬಸವಸಾಗರ ಜಲಾಶಯದ ಬಲದಂಡೆ ಹಾಗೂ ಎಡದಂಡೆ ವ್ಯಾಪ್ತಿಯ 89 ಸಾವಿರ ಎಕ್ಟೇರ್ ಪ್ರದೇಶಕ್ಕೆ ಏ.15ರವರೆಗೆ ನೀರು ಹರಿಸಬೇಕು. ಜಲಾಶಯದಲ್ಲಿ ಕೃಷಿಗಾಗಿ 6.60 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದ್ದು ಅದನ್ನು ಹರಿಸಿದರೆ ಮಾತ್ರ ರೈತರಿಗೆ ಅವರು ಬೆಳೆದಿರುವ ಬೆಳೆ ಕೈ ಸೇರುತ್ತದೆ” ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments