ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್ ನಲ್ಲಿ ಕೂದಲೆಳೆ ಅಂತರದಿಂದ ಅಗ್ರಸ್ಥಾನ ಪಡೆಯಲು ವಿಫಲರಾಗಿ 2ನೇ ಸ್ಥಾನ ಗಳಿಸಿದ್ದಾರೆ.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಗರಿಷ್ಠ 88.36 ಮೀ. ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದರು. ಜೆಕ್ ಗಣರಾಜ್ಯದ ಜೇಕಬ್ ವಾಲ್ಡೆಜ್ 88.38 ಮೀ. ದೂರ ಜಾವೆಲಿನ್ ಎಸೆದು ಕೂದಲೆಳೆ ಅಂತರದಲ್ಲಿ ಗೆದ್ದು ಚಿನ್ನದ ಪದಕ ಗಳಿಸಿದರು.
ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದ ನೀರಜ್ ಚೋಪ್ರಾ ತಮ್ಮ ಅತ್ಯುತ್ತಮ ಸಾಧನೆಗಿಂತ ಕೇವಲ 2 ಇಂಚು ಕಡಿಮೆ ಎಸೆದಿದ್ದರಿಂದ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.
ಅಂಡರ್ಸನ್ ಪೀಟರ್ಸ್ 85.75 ಮೀ. ದೂರದೊಂದಿಗೆ 3ನೇ ಸ್ಥಾನ ಗಳಿಸಿದರು. ಭಾರತದ ಮತ್ತೊಬ್ಬ ಜಾವೆಲಿನ್ ಸ್ಪರ್ಧಿ 76.31 ಮೀ. ದಾಖಲಿಸಿ ಉತ್ತಮ ಸಾಧನೆ ತೋರಿದರೂ ಅಗ್ರ 5ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಪ್ರತಿಷ್ಠಿತ ಟೂರ್ನಿಗೂ ಮುನ್ನ ಡೈಮಂಡ್ ಲೀಗ್ ಅತ್ಯಂತ ಮಹತ್ವದ ಟೂರ್ನಿಯಾಗಿದ್ದು, ಸ್ಪರ್ಧಿಗಳು ಫಾರ್ಮ್ ಕಂಡುಕೊಳ್ಳಲು ಉತ್ತಮ ವೇದಿಕೆಯಾಗಿದೆ.