ತಂಡದಲ್ಲಿನ ಬೆಳವಣಿಗೆ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮ ಹೇಳಿಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ತಲ್ಲಣ ಸೃಷ್ಟಿಸಿದ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಪೋಸ್ಟ್ ಮಾಡಿದ ವೀಡಿಯೊ ಡಿಲೀಟ್ ಮಾಡಿದೆ.
ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ತಂಡಗಳು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿ ಆಗುತ್ತಿದ್ದು, ಎರಡೂ ತಂಡಗಳ ಆಟಗಾರರು ಅಭ್ಯಾಸದ ವೇಳೆ ಪರಸ್ಪರ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಕೆಆರ್ ಆಟಗಾರನ ಜೊತೆ ರೋಹಿತ್ ಶರ್ಮ ನಡೆಸಿದ ಸಂಭಾವಣೆಯ ವೀಡಿಯೋ ಐಪಿಎಲ್ ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ಚರ್ಚೆ ನಡೆಸುತ್ತಿರುವ ವೇಳೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಏನಾದರೂ ನನಗೇನು? ಇದು ನನ್ನ ಕೊನೆಯದು ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನೇನೋ ಬದಲಾವಣೆ ಆಗುತ್ತಿದೆ. ಅದೆಲ್ಲಾ ಅವರಿಗೆ ಬಿಟ್ಟ ವಿಷಯ. ನಾನೇನು ಮಾಡಲು ಆಗುತ್ತೆ? ಏನೇ ಆದರೂ ನನ್ನ ಮನೆ ತಾನೇ? ನಾನೇ ಕಟ್ಟಿದ ದೇವಸ್ಥಾನ ಅಲ್ಲವೇ ಎಂದು ರೋಹಿತ್ ಶರ್ಮ ಹೇಳಿದ್ದಾರೆ.
ಸಂಭಾಷಣೆಯ ಕೊನೆಯಲ್ಲಿ ರೋಹಿತ್ ಶರ್ಮ ಏನಾದರೂ ಆಗಲಿ ಬಿಡು, ಇದು ಕೊನೆಯದು ಅಲ್ಲವಾ? ಎಂಬ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಕೆಕೆಆರ್ ಆಡಳಿತ ಮಂಡಳಿ ಸಾಮಾಜಿಕ ಜಾಲತಾಣದಿಂದ ವೀಡಿಯೊ ಡಿಲಿಟ್ ಮಾಡಿದೆ. ಆದರೆ ಡಿಲಿಟ್ ಆಗುವಷ್ಟರಲ್ಲಿ ಏನು ಅನಾಹುತ ಮಾಡಬೇಕಿತ್ತೋ ಅದು ಮಾಡಿದೆ.
ರೋಹಿತ್ ಶರ್ಮ ಮತ್ತು ಅಭಿಷೇಕ್ ನಾಯರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಿದ ವಿಷಯದ ಕುರಿತು ಚರ್ಚೆ ನಡೆದಿದ್ದು, ಚರ್ಚೆ ವೇಳೆ ರೋಹಿತ್ ಶರ್ಮ ತಮ್ಮ ಅಸಮಾಧಾನ ಹೊರಹಾಕಿದ್ದು, ಮುಂಬೈ ಇಂಡಿಯನ್ಸ್ ಪರ ಕೊನೆಯ ಬಾರಿ ಆಡುತ್ತಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಪರ ಕೊನೆಯದೋ ಅಥವಾ ಐಪಿಎಲ್ ಗೆ ಗುಡ್ ಬೈ ಹೇಳುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ.