ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರಜತ್ ಪಟಿದಾರ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 222 ರನ್ ಗುರಿ ಒಡ್ಡಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಆಹ್ವಾನ ಪಡೆದ ಆರ್ ಸಿಬಿ ಸಿಕ್ಕ ಅವಕಾಶವನ್ನು ಬಾಚಿಕೊಂಡು 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿತು.
ಆರ್ ಸಿಬಿ ಎರಡನೇ ಎಸೆತದಲ್ಲೇ ಫಿಲ್ ಸಾಲ್ಟ್ (4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಎರಡನೇ ವಿಕೆಟ್ ಗೆ 91 ರನ್ ಜೊತೆಯಾಟದಿಂದ ಭದ್ರ ಬುನಾದಿ ಹಾಕಿಕೊಟ್ಟರು. ಹೊಡಿಬಡಿ ಆಟದಿಂದ ಗಮನ ಸೆಳೆದ ದೇವದತ್ ಪಡಿಕಲ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿ ಔಟಾದರು.
ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದಂತೆ 67 ರನ್ ಸಿಡಿಸಿದರು. ನಾಯಕ ರಜತ್ ಪಟಿದಾರ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 64 ರನ್ ಚಚ್ಚಿದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.
ಲಿಯಾಮ್ ಲಿವಿಂಗ್ ಸ್ಟನ್ (0) ನಿರಾಸೆ ಮೂಡಿಸಿದರೂ ನಂತರ ಬಂದ ಜಿತೇಶ್ ಕುಮಾರ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 40 ರನ್ ಪೇರಿಸಿ ತಂಡದ ಮೊತ್ತ 200ರ ಗಡಿ ತಲುಪಲು ನೆರವಾದರು.
ಗಾಯದ ನಂತರ ಚೇತರಿಸಿಕೊಂಡು ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದ ಜಸ್ ಪ್ರೀತ್ ಬುಮ್ರಾ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು, ಟ್ರೆಂಟ್ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಆದರೆ ಬಹುತೇಕ ಬೌಲರ್ ಗಳು ದುಬಾರಿ ಎನಿಸಿಕೊಂಡರು.


