ಬೆಳಗಾವಿ: ಅಂಡರ್ ಗ್ರೌಂಡ್ ಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಗರದ ಕನಕದಾಸ ಸರ್ಕಲ್ ಬಳಿ ಬುಧವಾರ ನಡೆದಿದೆ.
ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ದುಂಡಪ್ಪ ಸರವಿ(38), ಶಿವಲಿಂಗ ಮಾರುತಿ ಸರವಿ (20) ಮೃತ ದುರ್ದೈವಿಗಳು.
ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ನೇತೃತ್ವದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಜೆಸಿಬಿ ಬಳಸಿ ಅಂಡರ್ ಗ್ರೌಂಡ್ ಚರಂಡಿ ಕಾಮಗಾರಿ ಮಾಡುವಾಗ ಈ ಅವಘಡ ಸಂಭವಿಸಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಇವರಿಬ್ಬರೂ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಣ್ಣಲ್ಲಿ ಸಿಲುಕಿಕೊಂಡಿದ್ದ ಇಬ್ಬರ ರಕ್ಷಣೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟರೊಳಗೆ ಬಸವರಾಜ್, ಶಿವಲಿಂಗ ಅವರು ಮೃತಪಟ್ಟಿದ್ದರು. ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಇಬ್ಬರ ಮೃತದೇಹ ರವಾನಿಸಲಾಗಿದೆ.


