ಅರಸನ ಅರಮನೆಗೆ ಕಾರ್ಮೋಣ ಕವಿದೀತು. ಮತ್ತೊಮ್ಮೆ ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದ್ದು, ಜಗತ್ತಿನಾದ್ಯಂತ ಈ ನಾಲ್ಕು ಸುನಾಮಿಗಳು ಎಲ್ಲವನ್ನೂ ಕಾಡುತ್ತವೆ ಎಂದು ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಗಾದಿ ಸಂದರ್ಭದಲ್ಲಿ ಉತ್ತರದ ನಾಡಿನಲ್ಲಿ ಹಗೆಯ ಹೆಬ್ಬೇಗೆ ಹಬ್ಬೀತು, ಹುಟ್ಟೀತು ಸುತ್ತುವರೆದು ಬರುವಾಗ ಜಗವೆಲ್ಲ ಕೋಳಾದೀತು ಎಂದು ಹೇಳಿದ್ದೆ. ಅದರಂತೆ ಜಮ್ಮು ಕಾಶ್ಮೀರದ ಪೆಹಲ್ಗಾವ್ ನಲ್ಲಿ ಸಾಮೂಹಿಕ ಹತ್ಯೆ ನಡೆಯಿತು ಎಂದು ಸಮರ್ಥಿಸಿಕೊಂಡರು.
ಜಗತ್ತಿನಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸೂಚನೆ ಇದೆ. ನೀರು ಉಕ್ಕಿ ಬರುತ್ತದೆ. ಬಿಸಿಲು ಉಕ್ಕಿ ಬರುತ್ತದೆ. ಗಾಳಿ ಉಕ್ಕಿ ಬರುತ್ತದೆ. ಬೆಂಕಿಯಿಂದ ಜನ ತತ್ತರಿಸಿ ಹೋಗ್ತಾರೆ.ಈ ವರ್ಷದಲ್ಲಿ ಒಂದು ರೋಗ ಬರುತ್ತದೆ. ಅದು 5 ವರ್ಷ ಇರುತ್ತದೆ. ಆದ್ದರಿಂದ ಸಾವುನೋವು ಇದೆ ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ. ಜಲ ಸುನಾಮಿ, ವಾಯು ಸುನಾಮಿ, ಭೂಸುನಾಮಿ,ಅಗ್ನಿ ಸುನಾಮಿ. ವಿಪರೀತ ಬಿಸಿಲಿನಿಂದ ಜನ ಬಾಳೋದೆ ಕಷ್ಟ. ಒಲೆ ಹತ್ತಿ ಉರಿದರೆ ನಿಲ್ಲಬಹುದು. ಧರೆ ಹತ್ತಿದರೆ ಏನು ಮಾಡೋದು. ಸಮುದ್ರ ಉಕ್ಕುತ್ತದೆ. ಗಾಳಿಯಿಂದ ಅನೇಕ ಸಾವು ನೋವಾಗುತ್ತದೆ ಎಂದರು.
ರಾಜ್ಯದಲ್ಲಿ ಈ ಬಾರಿ ಒಳ್ಳೆಯ ಮಳೆ ಬೆಳೆಯಾಗುತ್ತದೆ. ಸುತ್ತಮುತ್ತ ಅಕಾಲಿಕ ಮಳೆ ಆಗಿರುವುದರಿಂದ ಸಕಾಲಿಕ ಮಳೆಯಾಗಬಹುದು ಎಂದು ಅವರು ಹೇಳಿದರು.
ಜನರಲ್ಲಿ ಮತಾಂಧತೆ ಜಾತಿವಾಧ ಹೆಚ್ಚಾಗುತ್ತದೆ. ಸಾವು ನೋವು ಹೆಚ್ಚಾಗುತ್ತವೆ. ಭೂಕಂಪಗಳು ಹೆಚ್ಚಾಗುತ್ತವೆ. ಅಚ್ಚರಿಯ ದುಃಖದ ಪ್ರಸಂಗ ಭಾರತಕ್ಕೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಭೀತಿ ಇದೆ. ಆದರೆ ಯುದ್ಧ ಮಾಡುವವರು ತಯಾರಿ ನಡೆಸಿದ್ದರೆ, ಯುದ್ಧದ ಭೀತಿಯಿಂದ ಪಾಕಿಸ್ತಾನ ತತ್ತರಿಸುತ್ತಿದ್ದಾರೆ. ಎದುರಾಳಿ ಕೂಡ ಹಾಗೆ ಇರಬೇಕು ತಾನೆ ಎದುರಾಳಿ ಬೆಚ್ಚಿದಾಗ ಯಾರ ಮೇಲೆ ಯುದ್ದ ಮಾಡೋದು ಎಂದು ಸ್ವಾಮೀಜಿ ಹೇಳಿದರು.


